

ಬೆಂಗಳೂರು: ಸ್ಯಾಂಡಲ್ವುಡ್ನ ‘ಬೆಳದಿಂಗಳ ಬಾಲೆ’ ಸುಮನ್ ನಗರ್ಕರ್ ಇದೀಗ ಸೈಕ್ಯಾಟ್ರಿಸ್ಟ್ ಆಗಿದ್ದಾರೆ. ಅರೇ ಅದ್ಯಾವಾಗ ಅವರು ಓದಿ ಮನಃಶಾಸ್ತ್ರಜ್ಞೆಯಾದರು? ಹೀಗೊಂದು ಪ್ರಶ್ನೆ ಮೂಡಬಹುದು. ಸುಮನ್ ನಗರ್ಕರ್ ಸೈಕ್ಯಾಟ್ರಿಸ್ಟ್ ಆಗಿರುವುದು ‘ಮೃತ್ಯುಂಜಯ’ ಶೀರ್ಷಿಕೆಯ ಸಿನಿಮಾದಲ್ಲಿ.
ಕನ್ನಡದಲ್ಲಿ ಈ ಹಿಂದೆ ‘ಮಂತ್ರಂ’ ಶೀರ್ಷಿಕೆ ಚಿತ್ರವೊಂದು ತೆರೆಕಂಡಿತ್ತು. ಹಾರರ್ ಶೈಲಿಯ ಆ ಚಿತ್ರ ಒಳ್ಳೇ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿತ್ತು. ಇದೀಗ ಆ ಸಿನಿಮಾ ನಿರ್ದೇಶನ ಮಾಡಿದ್ದ ಸಂಗಮೇಶ್ ಸಜ್ಜನ್, ‘ಮೃತ್ಯುಂಜಯ’ ಸಿನಿಮಾಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ. ಆತ್ಮಹತ್ಯೆ ಸುಳಿಗೆ ಸಿಲುಕುವ ಯುವಜನರ ಮನಸ್ಥಿತಿಯ ಬಗ್ಗೆ ಈ ಚಿತ್ರದಲ್ಲಿ ಹೇಳಲಾಗಿದ್ದು, ಇದುವರೆಗೂ ಕಾಣಿಸಿಕೊಳ್ಳದಂತಹ ಒಂದು ಪಾತ್ರದಲ್ಲಿ ಸುಮನ್ ನಟಿಸಿದ್ದಾರೆ.
ಪಾತ್ರ ಮತ್ತು ಕೋವಿಡ್ ನಂತರ ಸಿನಿಮಾ ಮಾಡಿದ ಬಗ್ಗೆ ಮಾಹಿತಿ ನೀಡುವ ಸುಮನ್, ‘ಈ ಹಿಂದೆ ಶಿವಣ್ಣನ ‘ಮೃತ್ಯುಂಜಯ’ ಸಿನಿಮಾ ಬಂದಿತ್ತು. ಇದೀಗ ಅದೇ ಶೀರ್ಷಿಕೆಯ ಸಿನಿಮಾದಲ್ಲಿ ನಟಿಸಿದ್ದೇನೆ. ನಾಯಕ ಖಿನ್ನತೆಗೆ ಜಾರಿ ಆತ್ಮಹತ್ಯೆಗೆ ಯತ್ನಿಸುತ್ತಿರುತ್ತಾನೆ. ಆತನನ್ನು ಆ ಸಾವಿನಿಂದ ರಕ್ಷಿಸುವ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ಕರೊನಾದಿಂದ ಕೊಂಚ ಭಯದಲ್ಲಿಯೇ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೆ’ ಎಂಬುದು ಅವರ ಮಾತು. ಈ ಚಿತ್ರದ ಇನ್ನೊಂದು ವಿಶೇಷತೆ ಏನೆಂದರೆ ಕೇವಲ 192 ಗಂಟೆಗಳ (8ದಿನ) ಅವಧಿಯಲ್ಲಿ ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದು ಎಂದು ಸ್ವತಃ ನಿರ್ದೇಶಕ ಸಜ್ಜನ್ ಹೇಳಿಕೊಂಡಿದ್ದಾರೆ. ಹಿತೇಶ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಶ್ರೇಯಾ ಶೆಟ್ಟಿ ನಾಯಕಿ. ಚೇತನ್ ದುರ್ಗಾ, ಪವಿತ್ರಾ ಸೇರಿ ಹಲವರು ಚಿತ್ರದಲ್ಲಿದ್ದಾರೆ. ಶೈಲಜಾ ಪ್ರಕಾಶ್ ನಿರ್ವಣದ ಈ ಚಿತ್ರದ ಟೀಸರ್ ಅನ್ನು ನಟ ಯಶಸ್ ಸೂರ್ಯ ಬಿಡುಗಡೆ ಮಾಡಿದ್ದಾರೆ.