

| ಹರ್ಷವರ್ಧನ್ ಬ್ಯಾಡನೂರು
‘ಕೆಮಿಸ್ಟ್ರಿ ಆ್ ಕರಿಯಪ್ಪ’ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟಿ ಸಂಜನಾ ಆನಂದ್, ನಂತರ ಹಿಂದಿರುಗಿ ನೋಡಿಲ್ಲ. ಕನ್ನಡದ ಜತೆ ತೆಲುಗಿನಲ್ಲೂ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ ‘ಕುಷ್ಕ’, ‘ಸಲಗ’, ‘ಶೋಕಿವಾಲಾ’ ತೆರೆಗೆ ಬಂದ ಬೆನ್ನಲ್ಲೇ ಕಳೆದ ವರ್ಷ ‘ನೀನು ಮೀಕು ಬಾಳ ಕಾವಾಲ್ಸಿನವಾಡಿನಿ’ ಟಾಲಿವುಡ್‌ಗೆ ಎಂಟ್ರಿ ಕೊಟ್ಟರು. ಇದೀಗ ಅವರು ನಟಿಸಿರುವ ಎರಡನೇ ತೆಲುಗು ಚಿತ್ರ ‘ಫುಲ್ ಬಾಟಲ್’ ತೆರೆಗೆ ಬರಲು ರೆಡಿಯಾಗಿದೆ. ‘ಇದೊಂದು ಡಾರ್ಕ್ ಕಾಮಿಡಿ ಸಿನಿಮಾ. ಸತ್ಯದೇವ್ ನಾಯಕನಾಗಿದ್ದು, ನಾನು ಐಟಿ ಕಂಪನಿ ಮ್ಯಾನೇಜರ್ ಪಾತ್ರದಲ್ಲಿ ನಟಿಸಿದ್ದೇನೆ. ಸದ್ಯ ‘ಫುಲ್ ಬಾಟಲ್’ ರಿಲೀಸ್‌ಗೆ ಎದುರು ನೋಡುತ್ತಿದ್ದೇನೆ’ ಎಂದು ಹೇಳಿಕೊಳ್ಳುತ್ತಾರೆ ಸಂಜನಾ.
‘ರಾಯಲ್’ ಚಿತ್ರದಲ್ಲಿ ಸಲಗ ಸುಂದರಿ
‘ಕಿಸ್’ ಖ್ಯಾತಿಯ ವಿರಾಟ್ ನಾಯಕನಾಗಿರುವ ‘ರಾಯಲ್’ ಚಿತ್ರದಲ್ಲಿ ಸಂಜನಾ ನಾಯಕಿಯಾಗಿದ್ದಾರೆ. ದಿನಕರ್ ತೂಗುದೀಪ ನಿರ್ದೇಶಿಸುತ್ತಿರುವ ಚಿತ್ರವಿದು. ‘ಈಗಾಗಲೇ ಶೇಕಡಾ 80ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, 20ರಷ್ಟು ಮಾತ್ರ ಬಾಕಿಯಿದೆ. ನನ್ನ ಪಾತ್ರದ ಬಗ್ಗೆ ಈಗಲೇ ಏನೂ ಹೇಳುವಂತಿಲ್ಲ’ ಎನ್ನುತ್ತಾರೆ ಸಂಜನಾ ಆನಂದ್. ಅದಲ್ಲದೇ ಇನ್ನೂ ಎರಡು ಚಿತ್ರಗಳಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಒಂದು ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ಮತ್ತೊಂದು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ‘ಈ ಎರಡೂ ಚಿತ್ರಗಳ ಅಧಿಕೃತ ೋಷಣೆ ಆಗುವವರೆಗೂ ನಾನು ರಿವೀಲ್ ಮಾಡುವಂತಿಲ್ಲ. ಆದರೆ ಒಳ್ಳೆ ಪ್ರಾಜೆಕ್ಟ್‌ಗಳು ಅಂತಷ್ಟೇ ಹೇಳಬಲ್ಲೆ’ ಎಂದು ಹೇಳಿಕೊಳ್ಳುತ್ತಾರೆ ಸಂಜನಾ.
ತಮಿಳು ಭಾಷೆ ಕಲಿಯುತ್ತಿದ್ದೇನೆ
ಈಗಾಗಲೇ ಎರಡು ತೆಲುಗು ಚಿತ್ರಗಳಲ್ಲಿ ಅಭಿನಯಿಸಿರುವ ಸಂಜನಾ, ಸದ್ಯ ಕನ್ನಡದಲ್ಲೇ ಬಿಜಿಯಿರುವ ಕಾರಣ ಕೆಲವು ತೆಲುಗು ಪ್ರಾಜೆಕ್ಟ್ ಬಂದರೂ ಒಪ್ಪಿಕೊಂಡಿರಲಿಲ್ಲವಂತೆ. ಅದರ ನಡುವೆ ಅವರು ತಮಿಳು ಭಾಷೆಯನ್ನೂ ಕಲಿಯುತ್ತಿದ್ದಾರಂತೆ. ‘ನನಗೆ ಕನ್ನಡ, ಹಿಂದಿ, ಇಂಗ್ಲೀಷ್ ಮತ್ತು ತೆಲುಗು ಭಾಷೆಗಳು ಗೊತ್ತು. ತೆಲುಗು ಸಿನಿಮಾ ನಟಿಸುತ್ತಲೇ ನಾನು ಭಾಷೆ ಕಲಿತಿದ್ದು. ಕೆಲ ತಿಂಗಳ ಹಿಂದೆ ನನಗೆ ತಮಿಳು ಆರ್ ಬಂದಿತ್ತು. ಆದರೆ, ಚಿತ್ರತಂಡದವರ ಜತೆ ಮಾತನಾಡುವಷ್ಟು ಕೂಡ ನನಗೆ ಆ ಭಾಷೆಯ ಮೇಲೆ ಹಿಡಿತವಿರಲಿಲ್ಲ. ಹೀಗಾಗಿಯೇ, ಈಗ ತೆಲುಗು ಭಾಷೆ ಕಲಿಯುತ್ತಿದ್ದೇನೆ’ ಎಂದು ಹೇಳಿಕೊಳ್ಳುತ್ತಾರೆ ಸಂಜನಾ. ಚಿತ್ರರಂಗಕ್ಕೆ ಹೊಸಬರಾದ ಕಾರಣ ಅವರು ತುಂಬ ಎಚ್ಚರಿಕೆಯಿಂದ ಕಥೆ ಆಯ್ಕೆ ಮಾಡಿಕೊಳ್ಳುತ್ತಾರಂತೆ. ‘ಬಂದ ಅವಕಾಶಗಳನ್ನೆಲ್ಲ ಒಪ್ಪಿಕೊಳ್ಳಲು ಇಷ್ಟವಿಲ್ಲ. ಚಿತ್ರತಂಡ, ನಿರ್ದೇಶಕರು, ನನ್ನ ಪಾತ್ರ, ಚಿತ್ರದ ಕಥೆ… ಹೀಗೆ ಎಲ್ಲವೂ ಇಷ್ಟವಾದರೆ ಮಾತ್ರ ಒಪ್ಪಿಕೊಳ್ಳುತ್ತೇನೆ’ ಎನ್ನುತ್ತಾರೆ ಸಂಜನಾ.