

ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ‘ಮುಂಗಾರು ಮಳೆ 2’ ಸಿನಿಮಾ ಬಳಿಕ ಟಾಲಿವುಡ್ಗೆ ಹಾರಿದ ಮಂಗಳೂರು ಬೆಡಗಿ ನೇಹಾ ಶೆಟ್ಟಿ, ‘ರೌಡಿ ಬೇಬಿ’ಯಾಗಿರುವುದು ಗೊತ್ತೇ ಇದೆ. ಅಂದರೆ, ‘ರೌಡಿ ಬೇಬಿ’ ಶೀರ್ಷಿಕೆಯ ಸಿನಿಮಾದಲ್ಲಿ ನಾಯಕಿಯಾಗಿದ್ದಾರವರು. ಈಗ ಇದೇ ಸಿನಿಮಾ ತಂಡ ಶೀರ್ಷಿಕೆಯನ್ನು ಬದಲಿಸಿಕೊಂಡು ಹೊಸ ಟೈಟಲ್ ಜತೆಗೆ ಆಗಮಿಸಿದೆ. ಅದಕ್ಕೆ ಕಾರಣ ತಮಿಳಿನಲ್ಲಿ ಹಿಟ್ ಆದ ‘ರೌಡಿ ಬೇಬಿ..’ ಹಾಡು! ಧನುಷ್ ಮತ್ತು ಸಾಯಿ ಪಲ್ಲವಿ ಭರ್ಜರಿಯಾಗಿ ಹೆಜ್ಜೆ ಹಾಕಿದ್ದ ‘ರೌಡಿ ಬೇಬಿ’ ಹಾಡು ಯೂಟ್ಯೂಬ್ನಲ್ಲಿ ನೂರು ಕೋಟಿ ವೀಕ್ಷಣೆ ಪಡೆದು ಆಲ್ಟೈಮ್ ದಾಖಲೆ ಬರೆದಿದೆ. ಆ ಹಾಡಿನ ಶೀರ್ಷಿಕೆಯನ್ನೇ ತಂಡ ಬಳಸಿಕೊಂಡಿತ್ತು. ಆದರೆ, ಇದೀಗ ಕಾರಣಾಂತರಗಳಿಂದ ಶೀರ್ಷಿಕೆಯನ್ನು ಬದಲಿಸಲಾಗಿದೆ. ‘ರೌಡಿ ಬೇಬಿ’ ಬದಲು, ‘ಗಲ್ಲಿ ರೌಡಿ’ ಟೈಟಲ್ ಅಂತಿಮಮಾಡಿದೆಯಂತೆ.
ಕಳೆದ ಡಿಸೆಂಬರ್ನಲ್ಲಿಯೇ ‘ರೌಡಿ ಬೇಬಿ’ ಎಂದು ಶೀರ್ಷಿಕೆ ಘೋಷಣೆ ಮಾಡಿ ಶೂಟಿಂಗ್ ಆರಂಭಿಸಿದ ಚಿತ್ರತಂಡ, ಇದೀಗ ಬಹುತೇಕ ಎಲ್ಲ ಕೆಲಸಗಳನ್ನು ಮುಗಿಸಿಕೊಂಡಿದೆ. ತೆಲುಗು ನಟ ಸಂದೀಪ್ ಕಿಶನ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ನಾಗೇಶ್ವರ್ ರೆಡ್ಡಿ ನಿರ್ದೇಶನ ಮಾಡುತ್ತಿದ್ದಾರೆ. ಸಂದೀಪ್ಗೆ ಜೋಡಿಯಾಗಿ ನೇಹಾ ನಟಿಸಿದ್ದು, ಬಾಬಿ ಸಿಂಹ ಪ್ರಮುಖ ಪಾತ್ರದಲ್ಲಿದ್ದಾರೆ. ಇನ್ನು ನೇಹಾ ವಿಚಾರಕ್ಕೆ ಬರುವುದಾದರೆ, ಕನ್ನಡಕ್ಕಿಂತ ತೆಲುಗಿನಲ್ಲಿಯೇ ಹೆಚ್ಚು ಸಿನಿಮಾ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಈಗಾಗಲೇ ಅಖಿಲ್ ಜತೆಗೆ ‘ಮೋಸ್ಟ್ ಎಲಿಜಿಬಲ್ ಬ್ಯಾಚುಲರ್’ ಸಿನಿಮಾದಲ್ಲಿ ನಟಿಸಿದ್ದಾರೆ.