‘ಮಹಾಕಾಳಿ’ ಭೂಮಿ ಶೆಟ್ಟಿ : ತೆಲುಗಿನ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಕನ್ನಡತಿಯ ಮಿಂಚು

bhumi
Published on

ಕನ್ನಡದ ಅದರಲ್ಲೂ ಕರಾವಳಿ ಭಾಗದ ಹಲವು ನಟಿಯರು ಈಗಾಗಲೇ ತೆಲುಗು ಚಿತ್ರರಂಗದಲ್ಲಿ ಮೋಡಿ ಮಾಡುತ್ತಿದ್ದಾರೆ. ಅನುಷ್ಕಾ ಶೆಟ್ಟಿ, ಶ್ರೀನಿಧಿ ಶೆಟ್ಟಿ, ನೇಹಾ ಶೆಟ್ಟಿ, ಕೃತಿ ಶೆಟ್ಟಿ, ಚಿರಶ್ರೀ ಅಂಚನ್ ಹೀಗೆ ಪಟ್ಟಿ ಸಾಗುತ್ತದೆ. ಈ ಸಾಲಿಗೆ ಇದೀಗ ಮತ್ತೊಬ್ಬ ನಟಿ ಸೇರ್ಪಡೆಯಾಗಿದ್ದಾರೆ. ಅವರೇ ಕುಂದಾಪುರದ ಭೂಮಿ ಶೆಟ್ಟಿ. ಕನ್ನಡದ ‘ಕಿನ್ನರಿ’ ಧಾರಾವಾಹಿಯಲ್ಲಿ ನಟಿಸಿ, ‘ಬಿಗ್‌ಬಾಸ್ ಕನ್ನಡ ಸೀಸನ್ 7’ರ ಸ್ಪರ್ಧಿಯಾಗಿದ್ದ ಭೂಮಿ ಇದೀಗ ಟಾಲಿವುಡ್‌ನಲ್ಲಿ ಬಿಜಿಯಾಗುತ್ತಿದ್ದು, ಮಹತ್ವದ ಪ್ರಾಜೆಕ್ಟ್‌ಗಳಲ್ಲಿ ಅವಕಾಶ ಪಡೆದುಕೊಳ್ಳುತ್ತಿದ್ದಾರೆ. ಕಳೆದ ವರ್ಷ ತೆರೆಕಂಡಿದ್ದ ‘ಷರುತುಲು ವರ‌್ತಿಸ್ತಾಯಿ!’ ಮೂಲಕ ಟಾಲಿವುಡ್‌ಗೆ ಎಂಟ್ರಿ ನೀಡಿದ್ದ ಭೂಮಿ ಬಳಿಕ ವಿಜಯ್ ದೇವರಕೊಂಡ ಅಭಿನಯದ ‘ಕಿಂಗ್ಡಮ್’ ಚಿತ್ರದಲ್ಲಿ ಎರಡನೇ ನಾಯಕಿಯಾಗಿದ್ದರು. ಅವರ ಪಾತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದರ ಬೆನ್ನಲ್ಲೇ ‘ಮಹಾಕಾಳಿ’ ಎಂಬ ಮತ್ತೊಂದು ತೆಲುಗು ಚಿತ್ರಕ್ಕೆ ಭೂಮಿ ಅವಕಾಶ ಪಡೆದಿದ್ದಾರೆ. ಪಾತ್ರದ ಸ್ಟ್‌ಲುಕ್ ರಿಲೀಸ್ ಮಾಡುವ ಮೂಲಕ ಚಿತ್ರತಂಡ ನಟಿಯನ್ನು ಸ್ವಾಗತಿಸಿದೆ. ಕಾಳಿರೂಪದ ಸೂಪರ್ ಹೀರೋ ಆಗಿ ಇಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಪೋಸ್ಟರ್‌ನಲ್ಲಿ ದೈವಿಕ ರೂಪದಲ್ಲಿ ಭೂಮಿ ಕಾಣಿಸಿಕೊಂಡಿದ್ದಾರೆ. ‘ಮಹಾಕಾಳಿ’ ಚಿತ್ರಕ್ಕೆ ‘ಹನುಮಾನ್’ ನಿರ್ದೇಶಕ ಪ್ರಶಾಂತ್ ವರ್ಮಾ ಕಥೆ ಬರೆದಿದ್ದು, ‘ಮಾರ್ಟಿನ್ ಲೂಥರ್ ಕಿಂಗ್’ ಖ್ಯಾತಿಯ ಪೂಜಾ ಅಪರ್ಣಾ ಕೊಲ್ಲೂರು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಆರಾಧಿಸುವ ಕಾಳಿಯ ಹಿನ್ನೆಲೆ ಹಾಗೂ ನೆಲದ ಸಂಸ್ಕೃತಿಯನ್ನು ಈ ಚಿತ್ರದ ಮೂಲಕ ಕಟ್ಟಿಕೊಡುವ ಪ್ರಯತ್ನ ಚಿತ್ರತಂಡದ್ದು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿಬರಲಿರುವ ಈ ಚಿತ್ರದಲ್ಲಿ ಭೂಮಿ ಜತೆ ಬಾಲಿವುಡ್ ನಟ ಅಕ್ಷಯ್ ಖನ್ನಾ ಕಲಾಬಳಗದಲ್ಲಿದ್ದಾರೆ. -ಏಜೆನ್ಸೀಸ್

‘ಕಿಂಗ್ಡಮ್’ ಬಳಿಕ ‘ಮಹಾಕಾಳಿ’ಯಲ್ಲಿ ನಟಿಸುತ್ತಿದ್ದೇನೆ. ಆಡಿಷನ್ಸ್ ಮೂಲಕವೇ ನಾನು ಚಿತ್ರಕ್ಕೆ ಆಯ್ಕೆಯಾಗಿದ್ದು. ಆದರೆ, ಪಾತ್ರದ ಬಗ್ಗೆ ಈಗಲೇ ಏನೂ ಹೇಳುವಂತಿಲ್ಲ. ಈ ಪಾತ್ರ ನನ್ನ ವೃತ್ತಿಜೀವನದಲ್ಲಿ ಮೈಲುಗಲ್ಲು ಸಾಧಿಸಲಿದೆ. ‘ಮಹಾಕಾಳಿ’ ಪಾತ್ರ ಸಿಕ್ಕಿದಾಗಿನಿಂದ ನನ್ನೊಳಗೆ ಪಾಸಿಟಿವ್ ಹೆಚ್ಚಾಗುತ್ತಿದೆ. ದಿನದಿಂದ ದಿನಕ್ಕೆ ಉತ್ಸಾಹಿಯಾಗುತ್ತಿದ್ದೇನೆ. ಫಿಟ್‌ನೆಸ್ ಕಡೆ ಹೆಚ್ಚು ಗಮನ ಹರಿಸುತ್ತಿದ್ದೇನೆ. ಜೀವನವನ್ನು ನೋಡುವ ದೃಷ್ಟಿಕೋನ ಕೂಡ ಈಗ ಬದಲಾಗಿದೆ. ಇದೆಲ್ಲವೂ ಮಹಾಕಾಳಿಯ ವರಪ್ರಸಾದ ಎಂದೇ ಭಾವಿಸುವೆ. | ಭೂಮಿ ಶೆಟ್ಟಿ, ನಟಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net