

ಚಿತ್ರ: ಕಣ್ಣಾಮುಚ್ಚೆ ಕಾಡೇ ಗೂಡೇ
ನಿರ್ದೇಶನ: ನಟರಾಜ್ ಕೃಷ್ಣೇಗೌಡ
ತಾರಾಗಣ: ರಾಘವೇಂದ್ರ ರಾಜಕುಮಾರ್, ಅಥರ್ವ್ ಪ್ರಕಾಶ್, ಪ್ರಾರ್ಥನ ಸುವರ್ಣ, ಅರವಿಂದ ಬೋಳಾರ್, ರವಿ ರಾಮಕುಂಜ, ವೀರೇಶ್ ಕುಮಾರ್ ಮತ್ತಿತರರು.
ಶಿವ ಸ್ಥಾವರಮಠ
‘ಕಣ್ಣಾಮುಚ್ಚೆ ಕಾಡೇ ಗೂಡೇ....’. ನಾವು ಬಾಲ್ಯದಲ್ಲಿ ಈ ಆಟ ಆಡಿರುತ್ತೇವೆ. ಇನ್ನು ದೊಡ್ಡವರು, ಕೊಲೆ ಅಥವಾ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದಾಗ ಪೊಲೀಸರ ಜತೆ ಇಂತಹದ್ದೆ ಕಣ್ಣಾಮುಚ್ಚಾಲೆ ಆಟ ಆಡುತ್ತಾರೆ. ಅಂತೆಯೇ, ಖಾಸಗಿ ಡಿಟೆಕ್ಟಿವ್ ಒಬ್ಬ ಒಂದು ಕೊಲೆಯ ಕೇಸು ಮುಚ್ಚಿ ಹಾಕಲು ಹರಸಾಹಸ ಪಟ್ಟು, ಕೊನೆಗೆ ಏನೆಲ್ಲಾ ನಾಟಕ ಸೃಷ್ಟಿಸುತ್ತಾನೆ ಎಂಬುದೇ ನಟರಾಜ ಕೃಷ್ಣೇಗೌಡ ನಿರ್ದೇಶನದ ‘ಕಣ್ಣಾಮುಚ್ಚೆ ಕಾಡೇ ಗೂಡೇ’.
ಆಸ್ತಿಯ ವಿಚಾರಕ್ಕಾಗಿ ನಡೆಯುವ ಸಣ್ಣ ಕಲಹದಲ್ಲಿ ಅಕಸ್ಮಾತ್ ಆಗಿ ಅಮೂಲ್ಯ (ಪ್ರಾರ್ಥನಾ) ಕೊಲೆಯಾಗಿ ಬಿಡುತ್ತದೆ. ಆಗ ರಾಮ್ (ಅಥರ್ವ್), ಜಾನಕಿ (ಪ್ರಾರ್ಥನಾ) ಜತೆ ಸೇರಿ ಪ್ರಕರಣ ಮುಚ್ಚಿ ಹಾಕಲು ಮುಂದಾಗುತ್ತಾನೆ. ಈ ಸಮಯದಲ್ಲಿ ಪೊಲೀಸರಿಗೆ ಹೇಗೆ ಚಳ್ಳೆಹಣ್ಣು ತಿನ್ನಿಸಿ ಆ ಕೇಸ್ ಮತ್ತೊಬ್ಬರ ತಲೆಗೆ ಕಟ್ಟುತ್ತಾನೆ ಎಂಬುದೇ ಕಥೆ. ಇಡೀ ಕಥೆಯು ನಾಟಕೀಯವಾಗಿ ಮುಂದುವರಿಯುತ್ತದೆ. ಕೆಲವೊಮ್ಮೆ ಕುತೂಹಲ ಮೂಡಿಸಿದರೂ, ಕೊನೆಗೆ ಕಥೆಯನ್ನು ಊಹಿಸಬಹುದು. ಈ ನಡುವೆ ಒಂದಿಷ್ಟು ರೋಚಕ ಟರ್ನ್ ಆ್ಯಂಡ್ ಟ್ವಿಸ್ಟ್‌ಗಳು ‘ಕಣ್ಣಾ ಮುಚ್ಚಾಲೆ ಕಾಡೇ ಗೂಡೇ’ ಚಿತ್ರವನ್ನು ನೋಡಿಸಿಕೊಂಡು ಹೋಗುತ್ತವೆ. ನಟರಾಜ್ ಕಥೆ ನಿರೂಪಣೆಯಲ್ಲಿ ಇನ್ನಷ್ಟು ಗಟ್ಟಿತನ ತೋರಬೇಕಿತ್ತು. ಹಾಗೆಯೇ ಕೆಲವು ದೃಶ್ಯಗಳು ಅನಾವಶ್ಯಕ ಎನಿಸುತ್ತದೆ. ಕಥೆಗೆ ಕುತೂಹಲ ಮೂಡಿಸಲು ಕೆಲ ನಾಟಕೀಯ ಬೆಳವಣಿಗೆ ಸೃಷ್ಟಿಸಲಾಗಿದ್ದು, ಅದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ತೋರಿಸುವ ಅವಕಾಶವಿತ್ತು.
ವೈದ್ಯನ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಘವೇಂದ್ರ ರಾಜಕುಮಾರ್ ಚಿತ್ರಕ್ಕೆ ಮೆರುಗು ತಂದಿದ್ದಾರೆ. ಅಥರ್ವ್ ಪ್ರಕಾಶ್ ಹಾವ ಭಾವ, ನಟನೆಯಲ್ಲಿ ಗಮನಸೆಳೆಯುತ್ತಾರೆ. ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಪ್ರಾರ್ಥನಾ ಸುವರ್ಣ ಇನ್ನಷ್ಟು ಸಿದ್ಧತೆ ಬೇಕಿತ್ತು. ಅರವಿಂದ ಬೋಳಾರ್, ರವಿ ರಾಮಕುಂಜ, ದೀಪಕ್ ರೈ ಪಾಣಾಜೆ ಪ್ರೇಕ್ಷಕರನ್ನು ನಗಿಸುತ್ತಾರೆ. ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಪ್ರಿಯರು ಒಮ್ಮೆ ಥಿಯೇಟರ್‌ನಲ್ಲಿ ‘ಕಣ್ಣಾಮುಚ್ಚೆ ಕಾಡೇಗೂಡೆ’ ಆಡಬಹುದು!