ಕಾಂಗರೂ ಶೂಟಿಂಗ್ ಪೂರ್ಣ; ಆದಿತ್ಯ, ರಂಜನಿ ಅಭಿನಯದ ಸಸ್ಪೆನ್ಸ್ ಸಿನಿಮಾ

kangaroo
Published on

ಬೆಂಗಳೂರು: ‘ಡೆಡ್ಲಿ ಸೋಮ’, ‘ಎದೆಗಾರಿಕೆ’ ಸೇರಿ ಹಲವು ಕನ್ನಡ ಸಿನಿಮಾಗಳಲ್ಲಿ ನಾಯಕನಾಗಿರವ ನಟ ಆದಿತ್ಯ ಭಿನ್ನ ವಿಭಿನ್ನ ಪಾತ್ರಗಳಲ್ಲೂ ಮಿಂಚಿದ್ದಾರೆ. ಆದರೆ, 2021ರಲ್ಲಿ ಬಿಡುಗಡೆಯಾದ ‘ಮುಂದುವರೆದ ಅಧ್ಯಾಯ’ ಸಿನಿಮಾ ಬಳಿಕ ಆದಿತ್ಯ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ಮತ್ತೊಂದು ಸಸ್ಪೆನ್ಸ್ ಸಿನಿಮಾದಲ್ಲಿ ಮಿಂಚಲು ಆದಿತ್ಯ ರೆಡಿಯಾಗಿದ್ದಾರೆ. ಚಿತ್ರದ ಹೆಸರು ‘ಕಾಂಗರೂ’.

ಇದಕ್ಕೆ ಕಿಶೋರ್ ಮೇಗಳಮನೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯುವ ಜತೆಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ವಿಶೇಷ ಎಂದರೆ ಈ ಹಿಂದೆ ರಿಲೀಸ್ ಆದ ‘ಚಕ್ರವರ್ತಿ’ ಹಾಗೂ ‘ಮುಂದುವರೆದ ಅಧ್ಯಾಯ’ ಸಿನಿಮಾಗಳಲ್ಲಿ ಪೊಲೀಸ್ ಪಾತ್ರ ಮಾಡಿದ ಆದಿತ್ಯ ಈ ಚಿತ್ರದಲ್ಲೂ ಪೊಲೀಸ್ ಅಧಿಕಾರಿಯಾಗಲಿದ್ದು, ಸತತ ಮೂರನೇ ಬಾರಿ ಖಾಕಿ ಧರಿಸಲಿದ್ದಾರೆ. ‘ಕನ್ನಡತಿ’ ಖ್ಯಾತಿಯ ರಂಜನಿ ರಾಘವನ್ ಚಿತ್ರಕ್ಕೆ ನಾಯಕಿಯಾಗಿದ್ದು, ಸೈಕಿಯಾಟ್ರಿಸ್ಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ್ಯಾಮಿಲಿ ಎಂಟರ್‌ಟೇನ್ಮೆಂಟ್ ಎನ್ನುವ ನಿರ್ದೇಶಕ ಕಿಶೋರ್,‘ಕಾಂಗರೂ ಒಂದು ಮುಗ್ಧ ಪ್ರಾಣಿ. ಅದು ಯಾರಿಗೂ ಏನು ಮಾಡುವುದಿಲ್ಲ. ತನ್ನ ಮರಿಗೆ ಜನ್ಮ ನೀಡಿದ ನಂತರ ಅದರ ಹೊಟ್ಟೆಯ ಮೇಲ್ಭಾಗದಲ್ಲಿರುವ ಚೀಲದಲ್ಲಿ ಆ ಮರಿಯನ್ನು ಇಟ್ಟು ಕಾಪಾಡುತ್ತದೆ. ಆದರೆ, ತನ್ನ ಮರಿಗೆ ಯಾರಾದರೂ ತೊಂದರೆ ಕೊಡಲು ಮುಂದಾದರೆ ಯಾರನ್ನು ಬಿಡುವುದಿಲ್ಲ. ಈ ಪ್ರಾಣಿಯ ನಡವಳಿಕೆಯನ್ನು ಹೋಲುವ ಕಥೆಯಿದು’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ.

ಈಗಾಗಲೇ ಬೆಂಗಳೂರು, ಚಿಕ್ಕಮಗಳೂರು, ಹೊರನಾಡು ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಚಿತ್ರಕ್ಕೆ ಉದಯ್ ಲೀಲ ಛಾಯಾಗ್ರಹಣ ಹಾಗೂ ಅರ್ಜುನ್ ಕಿಟ್ಟು ಸಂಕಲನವಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net