ಇದು ಕಂಗನಾ ಹೊಸ ಅವತಾರ!

Kangana Ranaut - Final
Published on

ಬಾಲಿವುಡ್‌ನ ಅತ್ಯಂತ ವಿವಾದಾಸ್ಪದ ನಟಿ ಎಂದನಿಸಿಕೊಂಡಿರುವ ಕಂಗನಾ ರಣಾವತ್, ಸದ್ದಿಲ್ಲದೆ ಹೊಸ ಅವತಾರವೊಂದನ್ನು ಎತ್ತಿದ್ದಾರೆ. ಕಂಗನಾ ಹೊಸ ಅವತಾರ ಎಂದರೆ ಬಾಲಿವುಡ್ಡಿಗರು ಬೆಚ್ಚಿ ಬೀಳುತ್ತಾರೆ. ಈ ಬಾರಿ ಕಂಗನಾ ಇನ್ನೇನು ಮಾಡುವುದಕ್ಕೆ ಹೊರಟರಪ್ಪಾ ಎಂದು ಆತಂಕಗೊಳ್ಳುತ್ತಾರೆ. ಏಕೆಂದರೆ, ನಟನೆಯ ಜತೆಜತೆಗೆ ಕಂಗನಾ ನಿರ್ದೇಶನ, ಬರವಣಿಗೆ ಎಂದೆಲ್ಲಾ ತೊಡಗಿಸಿಕೊಂಡಿದ್ದಾರೆ. ಹಾಗಾಗಿ ಈ ಬಾರಿ ಇನ್ನೇನು ಮಾಡಬಹುದು ಎಂಬ ಕುತೂಹಲ ಸಹಜವಾದದ್ದೇ.

ಕಂಗನಾ ಈ ಬಾರಿ ಇಂಟೀರಿಯರ್ ಡಿಸೈನರ್ ಆಗಿದ್ದಾರೆ. ಆಶ್ಚರ್ಯವಾದರೂ ಇದು ನಿಜ. ಕಂಗನಾ ಅವರ ಅಕ್ಕ ರಂಗೋಲಿಯೇ, ಈ ಕುರಿತು ಸರ್ಟಿಫಿಕೇಟ್ ನೀಡಿದ್ದಾರೆ. ಕುಲು-ಮನಾಲಿಯಲ್ಲಿ ಕಟ್ಟಿಸಿರುವ ತಮ್ಮ ಹೊಸ ಮನೆಯ ಇಂಟೀರಿಯರ್ ಡಿಸೈನಿಂಗ್ ಮಾಡಿದ್ದು ತಮ್ಮ ಸಹೋದರಿಯೇ ಎಂದು ರಂಗೋಲಿ ಹೇಳಿಕೊಂಡಿದ್ದಾರೆ.

ರಂಗೋಲಿ ಮೊದಲಿಗೆ ತಮ್ಮ ಹೊಸ ಮನೆಯ ಇಂಟೀರಿಯರ್ ಕೆಲಸಗಳನ್ನು ಒಳ್ಳೆಯ ಡಿಸೈನರ್ ಒಬ್ಬರಿಂದ ಮಾಡಿಸಬೇಕು ಎಂದು ಯೋಚಿಸಿದ್ದರಂತೆ. ಆದರೆ, ಇಡೀ ಹಿಮಾಚಲ ಪ್ರದೇಶದಲ್ಲೇ ಒಬ್ಬರೂ ಲಾಯಕ್ಕಾದವರು ಸಿಗಲಿಲ್ಲವಂತೆ. ಕೊನೆಗೆ ಏನು ಮಾಡುವುದು ಎಂದು ಗೊತ್ತಾಗದೆ, ಕಂಗನಾರನ್ನು ಕೇಳಿದ್ದಾರೆ. ಅದೆಲ್ಲಿತ್ತೋ ಉತ್ಸಾಹ ಗೊತ್ತಿಲ್ಲ, ಯಾರು ಸಿಗದಿದ್ದರೇನು, ನಾನೇ ಮಾಡುವೆ ಎಂದು ಕಂಗನಾ ಹೊಸ ಅವತಾರ ಎತ್ತಿದ್ದಾರೆ. ಮನೆಯ ಇಂಟೀರಿಯರ್ ಡಿಸೈನಿಂಗ್ ಕೆಲಸವನ್ನು ತಾವೇ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ.

ಕಂಗನಾ ತಾನು ಒಪ್ಪಿಕೊಂಡ ಹೊಸ ಜವಾಬ್ದಾರಿಯನ್ನು ಬಹಳ ಚೆನ್ನಾಗಿ ನಿರ್ವಹಿಸಿದ್ದಾರೆ ಎಂದು ರಂಗೋಲಿ ಹಾಡಿ ಹೊಗಳಿದ್ದಾರೆ. ಅಷ್ಟೇ ಅಲ್ಲ, ಕೆಲವೊಮ್ಮೆ ಕಿರಿಕಿರಿಯಾಗಿದ್ದೂ ಉಂಟಂತೆ. ಮಧ್ಯರಾತ್ರಿ ಒಳ್ಳೆಯ ನಿದ್ರೆಯಲ್ಲಿರುವಾಗ, ಕಂಗನಾ ಫೋನ್ ಮಾಡಿ, ಮನೆಗೆ ಏನು ಬೇಕು-ಬೇಡ ಎಂದು ವಿಚಾರಿಸುತ್ತಿದ್ದರಂತೆ. ತಮಿಳುನಾಡಿನಲ್ಲಿ ‘ತಲೈವಿ’ ಚಿತ್ರದ ಚಿತ್ರೀಕರಣದಲ್ಲಿದ್ದಾಗಲೂ ಕಂಗನಾ, ಮನೆಯ ಇಂಟೀರಿಯರ್ ಬಗ್ಗೆ ಧ್ಯಾನ ಮಾಡುತ್ತಿದ್ದಳು ಎಂದು ರಂಗೋಲಿ ಹೇಳಿಕೊಂಡಿದ್ದಾರೆ.

ಇನ್ನು ಈ ಮನೆಯ ಇಂಟೀರಿಯರ್ ಡಿಸೈನಿಂಗ್ ಬಗ್ಗೆ ಮಾತಾಡಿರುವ ಕಂಗನಾ, ‘ಇದೊಂದು ರೀತಿಯ ಮೇಡ್ ಇನ್ ಇಂಡಿಯಾ ಮನೆ. ಏಕೆಂದರೆ, ಭಾರತದ ಎಲ್ಲಾ ಭಾಗದ ವಸ್ತುಗಳು ಇದರಲ್ಲಿವೆ. ಬೆಂಗಳೂರಿನ ಮೂರ್ತಿಗಳು, ದೆಹಲಿಯಿಂದ ಲೈಟ್‌ಗಳು, ಉದಯಪುರದಿಂದ ರಗ್‌ಗಳು ... ಹೀಗೆ ಯಾವ್ಯಾವ ಪ್ರಾಂತ್ಯದಲ್ಲಿ ಏನೇನು ಫೇಮಸ್ ಆಗಿದೆಯೋ, ಅವೆಲ್ಲವನ್ನೂ ಬಳಸಿಕೊಂಡು ಮನೆಯ ಇಂಟೀರಿಯರ್ ಡಿಸೈನಿಂಗ್ ಮಾಡಿದ್ದಾಗಿ’ ಹೇಳಿಕೊಳ್ಳುತ್ತಾರೆ ಕಂಗನಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net