

ಕಂಗನಾ ರಣಾವತ್ ಮತ್ತು ತಾಪ್ಸಿ ಪನ್ನು ನಡುವಿನ ಯುದ್ಧ ಈಗ ಇನ್ನೊಂದು ಹಂತ ಮುಟ್ಟಿದೆ. ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ನಂತರ ನೆಪೋಟಿಸಂ (ಸ್ವಜನಪಕ್ಷಪಾತ)ದ ವಿಷಯವನ್ನು ಎತ್ತಿಕೊಂಡ ಕಂಗನಾ, ಈ ವಿಷಯವಾಗಿ ಕರಣ್ ಜೋಹರ್ ಸೇರಿದಂತೆ ಬಾಲಿವುಡ್ನ ದೊಡ್ಡದೊಡ್ಡ ನಿರ್ಮಾಪಕ-ನಿರ್ದೇಶಕರನ್ನು ಟಾರ್ಗೆಟ್ ಮಾಡಿದರು. ಅದು ತಪ್ಪು ಎಂದು ಹೇಳಿದವರೂ ಟಾರ್ಗೆಟ್ ಆದರು.
ಹಾಗೆ ತಪ್ಪು ಎಂದವರ ಪೈಕಿ ನಟಿ ತಾಪ್ಸಿ ಸಹ ಒಬ್ಬರು. ಕರಣ್ ಜೋಹರ್ ಪರವಾಗಿ ಮಾತನಾಡಿದ್ದಿಕ್ಕೆ, ತಾಪ್ಸಿಗೆ ಬಕೆಟ್ ನಟಿ ಎಂಬ ಬಿರುದನ್ನು ಕಂಗನಾ ಮತ್ತು ತಂಡ ಕೊಟ್ಟರು. ಅಷ್ಟೇ ಅಲ್ಲ, ತಾಪ್ಸಿ ಒಬ್ಬ ಬಿ-ಗ್ರೇಡ್ ನಟಿ ಎಂದು ಅಪಹಾಸ್ಯ ಮಾಡಿದರು.
ಈಗ ಕಂಗನಾ ತಂಡದವರು ಈ ಗಲಾಟೆಯನ್ನು ಇನ್ನಷ್ಟು ಮುಂದುವರೆಸಿದ್ದಾರೆ. ಈ ಹಿಂದೆ ಯಾವಾಗಲೋ, ತಾಪ್ಸಿ ಮಾಡಿದ ಟ್ವೀಟ್ ಒಂದನ್ನು ಮುಂದಿಟ್ಟುಕೊಂಡು, ಮತ್ತೊಮ್ಮೆ ಪ್ರಹಾರ ನಡೆಸಿದ್ದಾರೆ. ಈ ಹಿಂದಿನ ಟ್ವೀಟ್ವೊಂದರಲ್ಲಿ, ತಾಪ್ಸಿ ತಾನು ಎ-ಲಿಸ್ಟ್ ನಟಿ ಅಲ್ಲ ಎಂದು ಹೇಳಿಕೊಂಡಿದ್ದರು. ಜತೆಗೆ, ಎ-ಲಿಸ್ಟ್ ನಟಿಯಾಗುವುದಕ್ಕೆ ಏನು ಮಾಡಬೇಕು ಎಂಬುದು ತಮಗೆ ಗೊತ್ತಿಲ್ಲ ಎಂದು ಹೇಳಿಕೊಂಡಿದ್ದರು.
ಈಗ ಇದೇ ವಿಷಯವನ್ನು ಕಂಗನಾ ತಂಡದವರು ಎತ್ತಿಕೊಂಡಿದ್ದಾರೆ. ಎ-ಗ್ರೇಡ್ ನಟಿಯಾಗುವುದು ಹೇಗೆ ಎಂದು ನಿಮಗೆ ಗೊತ್ತಿಲ್ಲದಿದ್ದರೆ, ನಾವು ಹೇಳಿಕೊಡುತ್ತೀವಿ ಎಂದು ಕಲೆವು ಸಲಹೆಗಳನ್ನು ಕೊಟ್ಟಿದ್ದಾರೆ.
ಒಳ್ಳೆಯ ನಟನೆ ಮತ್ತು ನೋಡುವುದಕ್ಕೆ ಚೆನ್ನಾಗಿದ್ದರಷ್ಟೇ ಸಾಲದು, ಒಂದು ದೊಡ್ಡ ಹಿಟ್ ಸಹ ಅವಶ್ಯಕ ಎಂಬುದು ಟೀಮ್ ಕಂಗನಾ ಅಭಿಪ್ರಾಯ. ಇದಕ್ಕೆ ಉದಾಹರಣೆಯಾಗಿ, ಅವರು ಕಂಗನಾ ರಣಾವತ್ ಅಭಿನಯದ 'ಕ್ವೀನ್', 'ತನು ವೆಡ್ಸ್ ಮನು ರಿಟರ್ನ್ಸ್' ಮತ್ತು 'ಮಣಿಕರ್ಣಿಕಾ' ಚಿತ್ರಗಳನ್ನು ಉದಾಹರಣೆಗೆ ನೀಡಿದ್ದಾರೆ. ಅಂತಹ ಬ್ಲಾಕ್ಬಸ್ಟರ್ಗಳನ್ನು ಕೊಟ್ಟರೆ ಮಾತ್ರ, ಎ-ಗ್ರೇಡ್ ನಟಿಯಾಗುವುದಕ್ಕೆ ಸಾಧ್ಯ ಎಂದು ಕಾಲೆಳೆದಿದ್ದಾರೆ.
ಅಷ್ಟೇ ಅಲ್ಲ, ಕಂಗನಾ ಮತ್ತು ಅವರ ತಂಡದ ಪ್ರಕಾರ, ಸದ್ಯಕ್ಕೆ ತಾಪ್ಸಿ ಅವರ ವೃತ್ತಿಬದುಕು ಅಷ್ಟೇನೂ ಅದ್ಭುತವಾಗಿಲ್ಲವಂತೆ. ಅಷ್ಟೇ ಅಲ್ಲ, ಸುಶಾಂತ್ಗೆ ನ್ಯಾಯ ಕೊಡಿಸಬೇಕು ಎಂದು ಕಂಗನಾ ಮಾಡುತ್ತಿರುವ ಹೋರಾಟವನ್ನು, ತಾಪ್ಸಿ ಯಾವ್ಯಾವುದೋ ವಿಚಾರದಿಂದ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಟೀಮ್ ಕಂಗನಾ ಅಭಿಪ್ರಾಯಪಟ್ಟಿದೆ.