ಒಂದು ವಾರಕ್ಕಿಂತ ಹೆಚ್ಚು ಕಾಲ ಇನ್ಸ್ಟಾಗ್ರಾಂನಲ್ಲಿ ಇರುವ ನಂಬಿಕೆ ಇಲ್ಲ: ಕಂಗನಾ

Kangana Ranaut - Final
Published on

ಮುಂಬೈ: ಆಕ್ಷೇಪಾರ್ಹ ಪೋಸ್ಟ್​ಗಳನ್ನು ಹಾಕುತ್ತಾರೆ ಎಂಬ ಕಾರಣಕ್ಕೆ ಕಂಗನಾ ರಣಾವತ್​ಗೆ ಟ್ವಿಟರ್​ ಶಾಶ್ವತವಾಗಿ ಬಹಿಷ್ಕಾರ ಹಾಕಿದೆ. ಅದರ ನಂತರ ಅವರು ಇನ್​ಸ್ಟಾಗ್ರಾಂಗೆ ಶಿಫ್ಟ್​ ಆಗಿದ್ದರು. ಇನ್​ಸ್ಟಾಗ್ರಾಂಗೆ ಬಂದು ಇನ್ನೂ ಒಂದು ವಾರವಾಗಿಲ್ಲ, ಆಗಲೇ ಅಲ್ಲಿಂದ ಹೊರಬರುವ ಸಾಧ್ಯತೆ ಇದೆ ಎಂದು ಸ್ವತಃ ಕಂಗನಾ ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಕಂಗನಾಗೆ ಕರೊನಾ ಪಾಸಿಟಿವ್​ ಆಗಿತ್ತು. ಈ ವಿಷಯವನ್ನು  ಅವರು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಆದಷ್ಟು ಬೇಗ ಕರೊನಾ ವೈರಸ್​ನ್ನು ಹೊಸಕಿ ಹಾಕುತ್ತೇನೆ ಎಂಬ ವಿಶ್ವಾಸವಿದೆ. ಕರೊನಾಗೆ ನಿಮ್ಮ ಮೇಲೆ ಆಕ್ರಮಣ ಮಾಡುವುದಕ್ಕೆ ಅವಕಾಶ ಕೊಡಬೇಡಿ. ನೀವು ಹೆದರಿದರೆ, ಅದು ನಿಮ್ಮನ್ನು ಮತ್ತಷ್ಟು ಹೆದರಿಸುತ್ತದೆ. ಕರೊನಾ ಎಂಬುದು ಸಣ್ಣ ಜ್ವರವಷ್ಟೇ. ಅದಕ್ಕೆ ಅತಿಯಾದ ಪ್ರಚಾರ ಸಿಕ್ಕಿದ್ದರಿಂದಲೇ, ಅದು ಜನರನ್ನು ಹೆದರಿಸುತ್ತಿದೆ ಎಂದು ಕಂಗನಾ ಬರೆದುಕೊಂಡಿದ್ದರು.

ಕಂಗನಾ ಅವರ ಈ ಪೋಸ್ಟ್​ ಕುರಿತು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಂಬಂಧ, ಇನ್​ಸ್ಟಾಗ್ರಾಂ ಆ ಪೋಸ್ಟ್​ ಡಿಲೀಟ್​ ಮಾಡಿತ್ತು. ಇದೇ ವಿಷಯವಾಗಿ ಮಾತನಾಡಿರುವ ಕಂಗನಾ, ಹೀಗೇ ಆದರೆ, ಒಂದು ವಾರಕ್ಕಿಂತ ಹೆಚ್ಚು ಕಾಲ ಇನ್​ಸ್ಟಾಗ್ರಾಂನಲ್ಲಿಇರುತ್ತೀನಿ ಎಂಬ ನಂಬಿಕೆ ಇಲ್ಲ ಎಂದು ಹೇಳಿಕೊಂಡಿದ್ದಾರೆ.

ಕರೊನಾವನ್ನು ಮೆಟ್ಟಿನಿಲ್ಲುತ್ತೀನಿ ಎಂದು ನಾನು ಹಾಕಿದ ಪೋಸ್ಟ್​ನ್ನು ಇನ್​ಸ್ಟಾಗ್ರಾಂ ಕಿತ್ತುಹಾಕಿದೆ. ಇದರಿಂದ ಕೆಲವರಿಗೆ ಬೇಸರವಾಗಿದೆ ಎಂಬ ಕಾರಣಕ್ಕೆ ಅಳಿಸಿ ಹಾಕಲಾಗಿದೆ. ಕಮ್ಯುನಿಸ್ಟ್​ಗಳು ಮತ್ತು ಭಯೋತ್ಪಾದಕರಿಗೆ ಸಹಾನುಭೂತಿ ವ್ಯಕ್ತಪಡಿಸುವವರ ಬಗ್ಗೆ ಗೊತ್ತು. ಆದರೆ, ಕೋವಿಡ್​ಗೂ ಅಭಿಮಾನಿಗಳು ಇದ್ದಾರೆ ಎಂಬ ವಿಷಯ ಗೊತ್ತಿರಲಿಲ್ಲ. ಇನ್​ಸ್ಟಾಗ್ರಾಂಗೆ ಬಂದು ಕೇವಲ ಎರಡು ದಿನಗಳಾಗಿವೆ. ನನ್ನ ಪೋಸ್ಟ್​ ಡಿಲೀಟ್​ ಆಗುತ್ತಿರುವುದು ನೋಡಿದರೆ, ಇಲ್ಲಿ ಒಂದು ವಾರಕ್ಕಿಂತ ಹೆಚ್ಚು ಕಾಲ ನಾನು ಇರಬಹುದು ಎಂದು ಅನಿಸುತ್ತಿಲ್ಲ ಎಂದು ಕಂಗನಾ ಪೋಸ್ಟ್​ ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net