ವೈರಸ್​ಗೆ ಅಗೌರವ ತೋರಿದರೆ ಬಹಳಷ್ಟು ಜನರಿಗೆ ಬೇಸರವಾಗುತ್ತೆ: ಕಂಗನಾ

Kangana Ranaut - Final
Published on

ಮುಂಬೈ: ಕೆಲವು ದಿನಗಳ ಹಿಂದೆ ಕರೊನಾ ಪಾಸಿಟಿವ್​ ಆಗಿದ್ದ ಕಂಗನಾ ರಣಾವತ್ ಈಗ ಹುಷಾರಾಗಿದ್ದಾರೆ. ಇದೀಗ ಅವರಿಗೆ ​ನೆಗೆಟಿವ್​ ಬಂದಿದ್ದು, ಈ ವಿಷಯವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಈ ವಿಷಯವನ್ನು ಸ್ವತಃ ಕಂಗನಾ ತಮ್ಮ ಇನ್​ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ. ಇವತ್ತು ಪರೀಕ್ಷೆ ಮಾಡಿಸಿದಾಗ ನನಗೆ ನೆಗೆಟಿವ್​ ಬಂದಿದೆ. ಈ ವೈರಸ್​ನ್ನು ನಾನು ಹೇಗೆ ಹೊಡೆದೋಡಿಸಿದೆ ಎಂದು ಹೇಳಿಕೊಳ್ಳಬೇಕಿದೆ. ಆದರೆ, ವೈರಸ್​ಗೆ ಅಗೌರವ ತೋರಿಸಿದರೆ ಕೆಲವರಿಗೆ ಬೇಸರವಾಗುತ್ತದೆ. ಹಾಗಾಗಿ ಏನೂ ಹೇಳುತ್ತಿಲ್ಲಎಂದು ಕಂಗನಾ ಹೇಳಿದ್ದಾರೆ.

ಕಂಗನಾ ಹಾಗೆ ಹೇಳುವುದಕ್ಕೂ ಕಾರಣವಿದೆ. ಕಂಗನಾಗೆ ಕರೊನಾ ಪಾಸಿಟಿವ್​ ಬಂದಾಗ, ಆ ವಿಷಯವನ್ನು  ಅವರು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಆದಷ್ಟು ಬೇಗ ಕರೊನಾ ವೈರಸ್​ನ್ನು ಹೊಸಕಿ ಹಾಕುತ್ತೇನೆ ಎಂಬ ವಿಶ್ವಾಸವಿದೆ. ಕರೊನಾಗೆ ನಿಮ್ಮ ಮೇಲೆ ಆಕ್ರಮಣ ಮಾಡುವುದಕ್ಕೆ ಅವಕಾಶ ಕೊಡಬೇಡಿ. ನೀವು ಹೆದರಿದರೆ, ಅದು ನಿಮ್ಮನ್ನು ಮತ್ತಷ್ಟು ಹೆದರಿಸುತ್ತದೆ. ಕರೊನಾ ಎಂಬುದು ಸಣ್ಣ ಜ್ವರವಷ್ಟೇ. ಅದಕ್ಕೆ ಅತಿಯಾದ ಪ್ರಚಾರ ಸಿಕ್ಕಿದ್ದರಿಂದಲೇ, ಅದು ಜನರನ್ನು ಹೆದರಿಸುತ್ತಿದೆ ಎಂದು ಕಂಗನಾ ಬರೆದುಕೊಂಡಿದ್ದರು.

ಕಂಗನಾ ಅವರ ಈ ಪೋಸ್ಟ್​ ಕುರಿತು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಂಬಂಧ, ಇನ್​ಸ್ಟಾಗ್ರಾಂ ಆ ಪೋಸ್ಟ್​ ಡಿಲೀಟ್​ ಮಾಡಿತ್ತು. ಇದೇ ವಿಷಯವಾಗಿ ಮಾತನಾಡಿರುವ ಕಂಗನಾ, ಹೀಗೇ ಆದರೆ, ಒಂದು ವಾರಕ್ಕಿಂತ ಹೆಚ್ಚು ಕಾಲ ಇನ್​ಸ್ಟಾಗ್ರಾಂನಲ್ಲಿಇರುತ್ತೀನಿ ಎಂಬ ನಂಬಿಕೆ ಇಲ್ಲ ಎಂದು ಹೇಳಿಕೊಂಡಿದ್ದರು.

ಈಗ ಕರೊನಾ ಇನ್​ಸ್ಟಾಗ್ರಾಂನಲ್ಲಿ ಒಂದು ವಾರಕ್ಕಿಂತ ಹೆಚ್ಚು ಸಮಯ ಇರುವುದರ ಜತೆಗೆ, ಕರೊನಾ ನೆಗೆಟಿವ್​ ಆಗಿರುವುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net