ಮೆಚ್ಚುಗೆಗೆ ಮುಚ್ಚುಮರೆ; ಕಂಗನಾ ರಣಾವತ್ ಆರೋಪ

Akshay
Published on

ಕಂಗನಾ ರಣಾವತ್ ಗುರುವಾರ ಇನ್ನೊಂದು ಬಾಂಬ್ ಸಿಡಿಸಿದ್ದಾರೆ. ‘ತಲೈವಿ’ ಚಿತ್ರದ ಟ್ರೇಲರ್ ಬಿಡುಗಡೆಯಾದ ನಂತರ ಅಕ್ಷಯ್ ಕುಮಾರ್ ಸೇರಿದಂತೆ ಹಲವು ಸ್ಟಾರ್ ನಟರು ಅವರಿಗೆ ರಹಸ್ಯವಾಗಿ ಫೋನ್ ಮಾಡಿ, ಮೆಚ್ಚುಗೆ ಸೂಚಿಸಿದರಂತೆ. ಆದರೆ, ಅದನ್ನೇ ಬಹಿರಂಗವಾಗಿ ಹೇಳುವುದಕ್ಕೆ ಅವರೆಲ್ಲ ಹೆದರುತ್ತಾರೆ ಎಂದು ಕಂಗನಾ ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಬಾಲಿವುಡ್​ನಲ್ಲಿ ಎಂತಹ ಪರಿಸ್ಥಿತಿ ಇದೆ ಎಂದರೆ, ನನ್ನನ್ನು ಬಹಿರಂಗವಾಗಿ ಹೊಗಳುವುದಕ್ಕೆ ಕೆಲವರು ಹೆದರುತ್ತಾರೆ. ‘ತಲೈವಿ’ ಚಿತ್ರದ ಟ್ರೇಲರ್ ಬಿಡುಗಡೆಯಾದ ನಂತರ ಅಕ್ಷಯ್ ಕುಮಾರ್ ತರಹದ ದೊಡ್ಡ ಸ್ಟಾರ್​ಗಳು ನನಗೆ ರಹಸ್ಯವಾಗಿ ಫೋನ್ ಮಾಡಿ ಮಾತನಾಡುತ್ತಾರೆ. ನನ್ನ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆದರೆ, ಆಲಿಯಾ ಅಥವಾ ದೀಪಿಕಾ ಪಡುಕೋಣೆ ಸಿನಿಮಾಗಳ ತರಹ ಅವರು ನನ್ನ ಸಿನಿಮಾಗಳ ಬಗ್ಗೆ, ನನ್ನ ಪ್ರತಿಭೆಯ ಬಗ್ಗೆ ಬಹಿರಂಗವಾಗಿ ಹೊಗಳುವುದಕ್ಕೆ ಹೆದರುತ್ತಾರೆ. ಅದಕ್ಕೆ ಕಾರಣ ಮೂವಿ ಮಾಫಿಯಾ’ ಎಂದು ಹೇಳಿಕೊಂಡಿದ್ದಾರೆ. ಈ ಕುರಿತು ಇನ್ನಷ್ಟು ಮಾತಾಡಿರುವ ಅವರು, ‘ಸಿನಿಮಾದಂತಹ ಕಲೆಯ ಪ್ರಪಂಚದಲ್ಲಿ ಕಲೆಯೇ ಮುಖ್ಯ ವಾಗಿರಬೇಕು ಹೊರತು, ರಾಜಕೀಯ ಮುಖ್ಯವಾಗಿರಬಾರದು. ನನ್ನ ರಾಜಕೀಯ ನಿಲುವುಗಳೇ ಏನೇ ಇರಲಿ, ಅದರಿಂದ ನನ್ನ ಪ್ರತಿಭೆಯನ್ನು ಹೊಸಕಿ ಹಾಕುವ ಕೆಲಸ ಮಾಡಬಾರದು. ಆ ತರಹ ಮಾಡಿದಾಗಲೆಲ್ಲಾ, ನಾನು ಗೆಲ್ಲುತ್ತಲೇ ಇರುತ್ತೇನೆ’ ಎಂದು ಕಂಗನಾ ಹೇಳಿಕೊಂಡಿದ್ದಾರೆ. ಕಂಗನಾ ಇಷ್ಟೆಲ್ಲಾ ಹೇಳಿದ್ದರೂ, ಅಕ್ಷಯ್ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net