

ಮುಂಬೈ: ಕಳೆದೊಂದು ವರ್ಷದಿಂದ ಮಾತು ಕಡಿಮೆ ಮಾಡಿ, 'ಎಮಜೆನ್ರ್ಸಿ' ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು ಬಾಲಿವುಡ್ ನಟಿ ಕಂಗನಾ ರಣಾವತ್. ಈಗ ಚಿತ್ರದ ಚಿತ್ರೀಕರಣವೂ ಮುಗಿದಿದೆ. ಇನ್ನೊಂದು ಕಡೆ ಅವರು ಟ್ವಿಟರ್ಗೆ ವಾಪಸ್ಸಾಗಿದ್ದಾರೆ. ಬಿಡುವಿನಲ್ಲಿ ಸರಣಿ ಟ್ವೀಟ್ಗಳನ್ನು ಮಾಡುತ್ತಿದ್ದಾರೆ. ಅದರಲ್ಲೂ ಶಾರುಖ್ ಖಾನ್ ಅಭಿನಯದ 'ಪಠಾಣ್' ಚಿತ್ರಕ್ಕೆ ಸಿಗುತ್ತಿರುವ ಯಶಸ್ಸು ಮತ್ತು ಉತ್ತೇಜನದ ಬಗ್ಗೆ ಸ್ವಲ್ಪ ಜಾಸ್ತಿಯೇ ಸಿಟ್ಟಾಗಿದ್ದಾರೆ.
'ಪಠಾಣ್' ಚಿತ್ರವು 'ಬೇಷರಮ್ ರಂಗ್' ಹಾಡಿನಿಂದಾಗಿ ಬಿಡುಗಡೆಗೂ ಮುನ್ನ ಸಾಕಷ್ಟು ವಿವಾದಕ್ಕೊಳಗಾಗಿತ್ತು. ಹಲವರು ಆ ಚಿತ್ರವನ್ನು ಬಾಯ್ಕಾಟ್ ಮಾಡಬೇಕು ಎಂದು ಕರೆ ನೀಡಿದ್ದರು. ಆದರೆ, ಅದೆಲ್ಲವುಗಳ ನಡುವೆಯೂ ಚಿತ್ರ ಗೆದ್ದು, ಎರಡೇ ದಿನದಲ್ಲಿ 120 ಕೋಟಿ ರೂ. ಕಲೆಕ್ಷನ್ ಮಾಡಿದೆ. ಚಿತ್ರಕ್ಕೆ ಸಿಗುತ್ತಿರುವ ಯಶಸ್ಸು ನೋಡಿ, ಬಾಲಿವುಡ್ ಮಂದಿಯೂ ಖುಷಿಯಾಗಿದ್ದಾರೆ. ದ್ವೇಷವನ್ನು ಪ್ರೀತಿ ಸೋಲಿಸುತ್ತದೆ ಎಂದು ಹೇಳಿದ್ದಾರೆ.
ಇದರಿಂದ ಕೆಂಡಮಂಡಲರಾಗಿರುವ ಕಂಗನಾ ಬಾಲಿವುಡ್ ಮಂದಿಯ ವಿರುದ್ಧ ಹರಿಹಾಯ್ದಿದ್ದಾರೆ, 'ಇನ್ನೊಂದು ಬಾರಿ ನಾನು ದ್ವೇಷ, ಪ್ರೀತಿ ಇಂಥ ಪದಗಳನ್ನೆಲ್ಲ ಕೇಳಿದರೆ, ಸುಮ್ಮನೆ ಇರುವುದಿಲ್ಲ. ಸರಿಯಾಗಿ ಕ್ಲಾಸ್ ತೆಗೆದುಕೊಳ್ಳಬೇಕಾಗುತ್ತದೆ. ನಿಮಗೆ ಯಶಸ್ಸು ಸಿಕ್ಕಿರುವಾಗ ಅದನ್ನು ಸಂಭ್ರಮಿಸಿ. ಒಳ್ಳೆಯ ಕೆಲಸ ಮಾಡಿ. ರಾಜಕೀಯದಿಂದ ದೂರ ಇರಿ' ಎಂದು ಎಚ್ಚರಿಕೆ ನೀಡಿದ್ದಾರೆ.