ನನಗಿಂತ ಚೆನ್ನಾಗಿ ನಿರ್ದೇಶನ ಮಾಡುವವರು ಇನ್ನೊಬ್ಬರು ಸಿಗುವುದಿಲ್ಲ: ಕಂಗನಾ

Kangana Ranaut - Final
Published on

ಮುಂಬೈ: ಕಳೆದ ವರ್ಷ ಇದೇ ಹೊತ್ತಿನಲ್ಲಿ ಕಂಗನಾ ಒಂದು ಸಿನಿಮಾ ಘೋಷಿಸಿದ್ದರು ನೆನಪಿದೆಯಾ? 'ಅಪರಿಜಾತ ಅಯೋಧ್ಯ' ಹೆಸರಿನ ಈ ಚಿತ್ರವನ್ನು ತಾವೇ ನಿರ್ದೇಶಿಸುವುದಾಗಿ ಹೇಳಿಕೊಂಡಿದ್ದರು ಕಂಗನಾ ರಣಾವತ್​.

ಆದರೆ, ಅವರ ಪ್ಲಾನ್​ನಲ್ಲಿ ಈಗ ಸ್ವಲ್ಪ ಬದಲಾವಣೆಗಳಾಗಿವೆ. ಆ ಚಿತ್ರವನ್ನು ಅವರು ಪಕ್ಕಕ್ಕಿಟ್ಟು ಇನ್ನೊಂದು ಚಿತ್ರವನ್ನು ಕೈಗೆತ್ತಿಕೊಳ್ಳುವುದಾಗಿ ಘೋಷಿಸಿದ್ದಾರೆ. 1975ರ ಎಮರ್ಜೆನ್ಸಿ ಕುರಿತಾದ ಈ ಚಿತ್ರಕ್ಕೆ 'ಎಮರ್ಜೆನ್ಸಿ' ಎಂದೇ ಹೆಸರಿಡಲಾಗಿದ್ದು, ಈ ಚಿತ್ರವನ್ನು ಕಂಗನಾ ತಮ್ಮ ಮಣಿಕರ್ಣಿಕಾ ಪ್ರೊಡಕ್ಷನ್ಸ್​ನಿಂದ ನಿರ್ಮಿಸುತ್ತಿರುವುದಷ್ಟೇ ಅಲ್ಲ, ಆ ಚಿತ್ರವನ್ನು ಅವರೇ ನಿರ್ದೇಶನ ಮಾಡಲಿದ್ದಾರಂತೆ.

ಈ ಕುರಿತು, ಅವರೇ ಗುರುವಾರ ತಮ್ಮ ಇನ್​ಸ್ಟಾಗ್ರಾಂ ಖಾತೆಯ ಮೂಲಕ ಘೋಷಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಈ ಚಿತ್ರದ ತಯಾರಿಗಳನ್ನೂ ಅವರು ಶುರ ಮಾಡಿದ್ದಾರೆ. ಮೊದಲಿಗೆ, ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರ ಪಾತ್ರವನ್ನು ಚಿತ್ರದಲ್ಲಿ ನಿರ್ವಹಿಸುತ್ತಿರುವ ಕಂಗನಾ, ಆ ಪಾತ್ರಕ್ಕಾಗಿ ಮೇಕಪ್​ ಟೆಸ್ಟ್​ ಮಾಡಿಸಿಕೊಂಡಿದ್ದಾರೆ.

ಈ ಕುರಿತು ಬರೆದುಕೊಂಡಿರುವ ಅವರು, 'ನಿರ್ದೇಶನ ಮಾಡುತ್ತಿರುವುದಕ್ಕೆ ಸಂತೋಷವಾಗಿದೆ. ಕಳೆದ ಒಂದು ವರ್ಷದಿಂದ ಈ ಸ್ಕ್ರಿಪ್ಟ್​ನಲ್ಲಿ ತೊಡಗಿಸಿಕೊಂಡಿದ್ದು, ನನಗಿಂತ ಈ ಚಿತ್ರವನ್ನು ಚೆನ್ನಾಗಿ ಮಾಡುವುದಕ್ಕೆ ಯಾರಿಂದ ಸಾಧ್ಯ? ಇದರಿಂದ ಬೇರೆ ಚಿತ್ರಗಳನ್ನು ಕೈಬಿಡಬೇಕಾದರೂ, ಆ ತ್ಯಾಗ ಮಾಡುವುದಕ್ಕೆ ನಾನು ಸಿದ್ಧ. ಈ ಚಿತ್ರದಿಂದ ಇನ್ನೊಂದು ಲೆವೆಲ್​ಗೆ ಹೋಗುತ್ತೇನೆ ಎಂಬ ನಂಬಿಕೆ ಖಂಡಿತಾ ಇದೆ' ಎಂದು ಕಂಗನಾ ಹೇಳಿಕೊಂಡಿದ್ದಾರೆ.

ಇದಕ್ಕೂ ಮುನ್ನ ಈ ಚಿತ್ರವನ್ನು ಸಾಯಿಕಬೀರ್​ ನಿರ್ದೇಶಿಸಬೇಕಿತ್ತು. ಆದರೆ, ಸಾಯಿಕಬೀರ್​ಗೆ ಇನ್ನೊಂದು ಚಿತ್ರದ ಜವಾಬ್ದಾರಿ ಕೊಟ್ಟು, ನಿರ್ದೇಶನವನ್ನು ತಾವೇ ಮಾಡುವುದಕ್ಕೆ ಹೊರಟಿದ್ದಾರೆ ಕಂಗನಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net