

ನವದೆಹಲಿ: ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸಂಸದೆಯಾಗಿ ಆಯ್ಕೆಯಾದ ನಂತರ ಕಂಗನಾ ರಣಾವತ್ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಹಾಗಂತ ಸಿನಿಮಾದಿಂದ ಅಂತರ ಕಾಯ್ದುಕೊಂಡಿಲ್ಲ. ಕಂಗನಾ ನಟಿಸಿರುವ "ಎಮರ್ಜೆನ್ಸಿ" ಸಿನಿಮಾ ಸೆಪ್ಟೆಂಬರ್ 6ರಂದು ಬಿಡುಗಡೆಯಾಗಲಿದೆ.
ಎಮರ್ಜೆನ್ಸಿ ಸಿನಿಮಾದಲ್ಲಿ ಕಂಗನಾ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಟ್ರೇಲರ್‌ನಲ್ಲಿ ಕಂಗನಾ ರಣಾವತ್ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಈ ರಾಜಕೀಯ ಆಧಾರಿತ ಸಿನಿಮಾದಿಂದಾಗಿ ಕಂಗನಾ ಮತ್ತೆ ರಾಷ್ಟ್ರಪ್ರಶಸ್ತಿ ಗೆಲ್ಲಬಹುದು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಸಿನಿಮಾ ಬಿಟ್ಟು ವೈಯಕ್ತಿಕ ವಿಚಾರಕ್ಕೆ ಬರುವುದಾದರೆ, ವಯಸ್ಸು 38 ಆದರೂ ನಟಿ ಕಂಗನಾಗೆ ಇನ್ನೂ ಮದುವೆ ಆಗಿಲ್ಲ. ಹೀಗಾಗಿ ಅಭಿಮಾನಿಗಳು ನಟಿಯನ್ನು ಸದಾ ಕೇಳುವ ಪ್ರಶ್ನೆಗಳಲ್ಲಿ ಒಂದು ಮದುವೆ ಯಾವಾಗ ಎಂಬುದು. ಇದೀಗ ಆ ಪ್ರಶ್ನೆಗೆ ಕಂಗನಾ ಅವರು ಉತ್ತರ ನೀಡಿದ್ದಾರೆ.
ಯೂಟ್ಯೂಬರ್ ರಾಜ್ ಶಾಮಾನಿ ಅವರ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ ಕಂಗನಾ ಅವರಿಗೆ ಮದುವೆಯಾಗಲು ಮತ್ತು ಕುಟುಂಬವನ್ನು ಪ್ರಾರಂಭಿಸಲು ಬಯಸುವಿರಾ? ಎಂದು ಪ್ರಶ್ನಿಸಲಾಯಿತು. ಇದಕ್ಕೆ ಹೌದು ಎಂದು ಉತ್ತರಿಸಿದ ಕಂಗನಾ, ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಸಂಗಾತಿಯನ್ನು ಹೊಂದಿರಬೇಕೆಂದು ನಾನು ಭಾವಿಸುತ್ತೇನೆ. ಸಂಗಾತಿಯೊಂದಿಗೂ ಸಮಸ್ಯೆಗಳಿರುತ್ತವೆ. ಆದರೆ ಸಂಗಾತಿ ಇಲ್ಲದಿದ್ದರೆ ಆ ಸಮಸ್ಯೆಗಳು ಇನ್ನು ಹೆಚ್ಚಾಗುತ್ತವೆ. ಆದರೆ, ಸಂಗಾತಿಯನ್ನು ಹುಡುಕುವುದೇ ಒಂದು ದೊಡ್ಡ ಸವಾಲು. ನಿಮ್ಮ ಸ್ವಂತ ಸಂಗಾತಿಯನ್ನು ನೀವು ಕಂಡುಕೊಂಡರೆ, ಅದು ನಿಮಗೆ ಸಂಭವಿಸಬಹುದಾದ ದೊಡ್ಡ ವಿಪತ್ತು. ಅದು ತಾನಾಗಿಯೇ ಬರುತ್ತದೆ ಮತ್ತು ಯಾವುದೇ ಟೈಮ್‌ಲೈನ್ ಎಂಬುದು ಇರುವುದಿಲ್ಲ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಂಗನಾ ರಣಾವತ್, ಚಿಕ್ಕ ವಯಸ್ಸಿನಲ್ಲೇ ಮದುವೆಯಾಗುವುದರಿಂದ ಆಗುವ ಪ್ರಯೋಜನಗಳನ್ನು ವಿವರಿಸಿದ್ದಾರೆ. ಬೆಳೆದಾಗ ಒಬ್ಬರಿಗೊಬ್ಬರು ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ಚಿಕ್ಕವಯಸ್ಸಿನಲ್ಲಿ ಮದುವೆಯಾಗುವುದರಿಂದ ಹೊಂದಿಕೊಳ್ಳುವುದು ಸುಲಭವಾಗುತ್ತದೆ. ಹಳ್ಳಿಗಳಲ್ಲಿ ಚಿಕ್ಕವಯಸ್ಸಿನಲ್ಲೇ ಮದುವೆಯಾಗುತ್ತಿದ್ದಾರೆ ಎಂದರು.
2021ರಲ್ಲಿ ಟೈಮ್ಸ್ ನೌ ಜೊತೆ ಮಾತನಾಡಿದ್ದ ಕಂಗನಾ, ನಾನು ಖಂಡಿತವಾಗಿಯೂ ಮದುವೆಯಾಗಲು ಮತ್ತು ಮಕ್ಕಳನ್ನು ಹೊಂದಲು ಬಯಸುತ್ತೇನೆ. ನಾನು ಐದು ವರ್ಷಗಳ ನಂತರ ತಾಯಿಯಾಗಿ ಮತ್ತು ಹೆಂಡತಿಯಾಗಿ ನನ್ನನ್ನು ನೋಡಲು ಬಯಸುತ್ತೇನೆ. ಅದರೆ, ಎಲ್ಲದಕ್ಕೂ ಒಂದು ಸಮಯವಿದೆ ಮತ್ತು ಆ ಸಮಯ ನನ್ನ ಜೀವನದಲ್ಲಿ ಬರಬೇಕಾದರೆ ಅದು ಬರುತ್ತದೆ. ನಾನು ಮದುವೆಯಾಗಲು ಮತ್ತು ನನ್ನ ಸ್ವಂತ ಕುಟುಂಬವನ್ನು ಹೊಂದಲು ಬಯಸುತ್ತೇನೆ. ಆದರೆ, ಅದು ಸರಿಯಾದ ಸಮಯದಲ್ಲಿ ಸಂಭವಿಸುತ್ತದೆ ಎಂದಿದ್ದರು.
ಸಿನಿಮಾ ವಿಚಾರಕ್ಕೆ ಬರುವುದಾದರೆ, ಕಂಗನಾ ಅವರು ಮುಂದಿನ ಎಮರ್ಜೆನ್ಸಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಲನಚಿತ್ರವು 2024 ಸೆಪ್ಟೆಂಬರ್ 6ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದನ್ನು ಜೀ ಸ್ಟುಡಿಯೋಸ್ ಮತ್ತು ಮಣಿಕರ್ಣಿಕಾ ಫಿಲಂಸ್ ನಿರ್ಮಿಸಿದೆ. ಎಮರ್ಜೆನ್ಸಿ ಚಿತ್ರದಲ್ಲಿ ಅನುಪಮ್ ಖೇರ್, ಮಹಿಮಾ ಚೌಧರಿ, ಮಿಲಿಂದ್ ಸೋಮನ್, ಶ್ರೇಯಸ್ ತಲ್ಪಾಡೆ, ವಿಶಾಕ್ ನಾಯರ್ ಮತ್ತು ದಿವಂಗತ ಸತೀಶ್ ಕೌಶಿಕ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್)