ನಿಂಗೆ ಸ್ಕ್ರಿಪ್ಟ್ ಬರೆದುಕೊಟ್ಟಿದ್ದು ಯಾರು? ರಿಯಾಗೆ ಕಂಗನಾ ಪ್ರಶ್ನೆ

Sushant-Singh-and-Kangana-Final
Published on

ಕೆಲವು ವಿಷಯಗಳಲ್ಲಿ ರಿಯಾ ಚಕ್ರವರ್ತಿಯನ್ನು ಬೆಂಬಲಿಸಿದ್ದ ನಟಿ ಕಂಗನಾ ರಣಾವತ್, ಈಗ ಖಂಡಿಸಿದ್ದಾರೆ. ಅದಕ್ಕೆ ಕಾರಣ, ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಡಿಪ್ರೆಶನ್ ಇದೆ ಎಂದು ರಿಯಾ ಹೇಳಿಕೊಂಡಿದ್ದು.

ಸುಶಾಂತ್ ಸಾವಿನ ನಂತರ, ಗುರುವಾರ ಆಜ್ ತಕ್‍ನಲ್ಲಿ ಲೈವ್ ಬಂದು ಹಲವು ವಿಷಯಗಳನ್ನು ಹಂಚಿಕೊಂಡಿರುವ ರಿಯಾ, ಸುಶಾಂತ್‍ಗೆ ಡಿಪ್ರೆಶನ್ ಇತ್ತು ಮತ್ತು ಅದಕ್ಕಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದರು ಎಂಬ ವಿಷಯವನ್ನು ಹೇಳಿಕೊಂಡಿದ್ದಾರೆ.

`ಸುಶಾಂತ್ ಕಳೆದ ಒಂದು ವರ್ಷದಿಂದ ಆ್ಯಂಗ್ಸೈಟಿ ಮತ್ತು ಡಿಪ್ರೆಶನ್‍ನಿಂದ ಬಳಲುತ್ತಿದ್ದರು. ಅದಕ್ಕಾಗಿ ಅವರು ಚಿಕಿತ್ಸೆಯನ್ನು ಸಹ ಅವರು ಪಡೆಯುತ್ತಿದ್ದರು. ಈ ವಿಷಯವಾಗಿ ಅವರೇ ವೈದ್ಯರನ್ನು ಸಂಪರ್ಕಿಸಿದರೇ ಹೊರತು, ನಾನು ಅವರನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿರಲಿಲ್ಲ. ಇದಕ್ಕೂ ಮುನ್ನ 2013ರಲ್ಲೂ ಒಮ್ಮೆ ಅವರು ಡಿಪ್ರೆಶನ್‍ನಿಂದ ಬಳಲುತ್ತಿದ್ದರಂತೆ. ಅಷ್ಟೇ ಅಲ್ಲ, ಅವರ ತಾಯಿ ಸಹ ಡಿಪ್ರೆಶನ್‍ನಿಂದ ಬಳಲುತ್ತಿದ್ದರು ಎಂಬ ವಿಷಯವನ್ನು ಕೇಳಿದ್ದೇನೆ' ಎಂದು ರಿಯಾ ಹೇಳಿಕೊಂಡಿದ್ದಾರೆ.

ಸುಶಾಂತ್ ಅವರು ಡಿಪ್ರೆಶನ್‍ನಿಂದ ಬಳಲುತ್ತಿದ್ದರು ಎಂಬ ಹೇಳಿಕೆಯ ನಂತರ ರಿಯಾ, ಕಂಗನಾ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಕುರಿತು ಕಂಗನಾ, ಟ್ವೀಟ್ ಮಾಡಿ ರಿಯಾ ಅವರನ್ನು ಖಂಡಿಸಿದ್ದಾರೆ.

`ಸುಶಾಂತ್ ಅವರ ಜೀವನದಲ್ಲಿ ರಿಯಾ ಬರುವುದಕ್ಕಿಂತ ಮುನ್ನ ಅವರಿಗೆ ಯಾವುದೇ ಮಾನಸಿಕ ಖಾಯಿಲೆ ಇರಲಿಲ್ಲ. ಈ ಮಾನಸಿಕ ಖಾಯಿಲೆ ಪ್ಲಾಟ್ ಶುರುವಾಗಿದ್ದು, ರಿಯಾ ಬಂದ ನಂತರವಷ್ಟೇ. ಇಂಥದ್ದೊಂದು ಸ್ಕ್ರಿಪ್ಟ್ ಮಾಡಿಕೊಟ್ಟಿದ್ದು ಯಾರು' ಎಂದು ಕಂಗನಾ ಪ್ರಶ್ನಿಸಿದ್ದಾರೆ. 

ಈ ಕುರಿತು ಇನ್ನೊಂದು ಟ್ವೀಟ್ ಮಾಡಿರುವ ಅವರು, `ರಿಯಾ ಅವರ ಸಂದರ್ಶನ ನೋಡಿದಾಗ ನನಗೆ ಅನಿಸಿದ್ದು, ಎರಡು ವಿಷಯಗಳು. ಮೊದಲನೆಯದಾಗಿ, ಬಾಲಿವುಡ್ ಮಾಫಿಯಾದವರು ಸುಶಾಂತ್ ಮನಸ್ಸನ್ನು ಸಾಕಷ್ಟು ಘಾಸಿಗೊಳಿಸಿದರು. ಆ ನಂತರ ರಿಯಾ, ಮಹೇಶ್ ಭಟ್ ಮುಂತಾದ ಹದ್ದುಗಳು ಇನ್ನಷ್ಟು ಕೊಂದರು' ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net