

ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಇದೀಗ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ (Social Media) ವ್ಯಾಪಕವಾಗಿ ಸದ್ದು ಮಾಡುತ್ತಿದ್ದಾರೆ. ಆದ್ರೆ, ಈ ಬಾರಿ ವಿವಾದಾತ್ಮಕ ಹೇಳಿಕೆಯಿಂದಲ್ಲ, ಬದಲಾಗಿ ದೊಡ್ಡ ಸಿನಿಮಾದ ಮೂಲಕ ಎಂಬುದು ನೆಟ್ಟಿಗರಿಗೆ ಸಾಕಷ್ಟು ಕುತೂಹಲ ಕೆರಳಿಸಿದೆ.
ತಮ್ಮ ಮುಂದಿನ ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಅಧಿಕೃತವಾಗಿ ಘೋಷಿಸಿರುವ ನಟಿ ಕಂಗನಾ ರಣಾವತ್, ಚಂದ್ರಮುಖಿ 2 ಮತ್ತು ಎಮರ್ಜೆನ್ಸಿ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಎರಡು ಸಿನಿಮಾಗಳ ಚಿತ್ರೀಕರಣ ಈಗಾಗಲೇ ಸಂಪೂರ್ಣವಾಗಿದ್ದು, ಈ ಮಧ್ಯೆಯೇ ಇದೀಗ ಹೊಸ ಸಿನಿಮಾದ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ನಟಿ ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್ನಲ್ಲಿ ಮಾಹಿತಿ ನೀಡಿದ್ದು, ನನ್ನ ಮುಂದಿನ ಪ್ರಾಜೆಕ್ಟ್ 30 ವರ್ಷಗಳಿಂದ ತಿಳಿದಿರುವ ಲೆಜೆಂಡ್ ಸ್ಟುಡಿಯೋಸ್‌ನ ನಿರ್ಮಾಪಕ ಸಂದೀಪ್ ಸಿಂಗ್ ಅವರೊಂದಿಗೆ ಎಂದು ಘೋಷಿಸಿದ್ದಾರೆ. ಈ ಸಿನಿಮಾ ನನ್ನ ವೃತ್ತಿಜೀವನದ ಅತಿದೊಡ್ಡ ಚಿತ್ರ ಮತ್ತು ಅದ್ಭುತ ಪಾತ್ರವಾಗಿದೆ. ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಹಂಚಿಕೊಳ್ಳುತ್ತೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ನಟಿ ಕಂಗನಾ ಅವರೇ ತಮ್ಮ ಮಣಿಕರ್ಣಿಕಾ ಫಿಲ್ಮ್ಸ್ (Manikarnika Films) ಬ್ಯಾನರ್ ಅಡಿಯಲ್ಲಿ ಈ ಚಿತ್ರಕ್ಕೆ ನಿರ್ಮಾಣ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಕಂಗನಾ ರಣಾವತ್ ಅವರ ಮುಂದಿನ ಸಿನಿಮಾ ಎಮರ್ಜೆನ್ಸಿ ಇದೇ ನವೆಂಬರ್ 24, 2023 ರಂದು ತೆರೆಗೆ ಬರಲು ಸಿದ್ದವಾಗಿದ್ದು, ಚಂದ್ರಮುಖಿ 2 ಸೆಪ್ಟೆಂಬರ್ 15, 2023 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಜ್ಜಾಗಿದೆ ಎಂದು ವರದಿ ತಿಳಿಸಿದೆ,(ಏಜೆನ್ಸೀಸ್).