ಒಳ್ಳೇ ಸಿನಿಮಾ ಮಾಡಿದ್ದೇವೆ ಥಿಯೇಟರ್​ಗೆ ಬನ್ನಿ ಅಂತ ಕಣ್ಣೀರು ಸುರಿಸುತ್ತಿದ್ದಾನೆ ಈ ಚಿತ್ರದ ನಾಯಕ

ಕಾಣದಂತೆ
Published on

‘ಕಳೆದ ನಾಲ್ಕು ವರ್ಷದಿಂದ ‘ಕಾಣದಂತೆ ಮಾಯವಾದನು’ ಸಿನಿಮಾದಲ್ಲಿಯೇ ಮುಳುಗಿದ್ದೆ. ಇತ್ತೀಚೆಗಷ್ಟೇ ಸಿನಿಮಾ ಬಿಡುಗಡೆ ಆಗಿದೆ. ಆದರೆ, ಒಂದೇ ಒಂದು ಪೈಸೆಯೂ ನನ್ನ ಕೈಗೆ ಬಂದಿಲ್ಲ. ದಯವಿಟ್ಟು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ...’ ಹೀಗೆ ಅಳಲು ತೋಡಿಕೊಂಡಿದ್ದು ನಟ ವಿಕಾಸ್. ವಿಮರ್ಶೆ ದೃಷ್ಟಿಯಿಂದ ಮೆಚ್ಚುಗೆ ಗಿಟ್ಟಿಸಿಕೊಂಡಿದ್ದ ‘ಕಾಣದಂತೆ ಮಾಯವಾದನು’ ಸಿನಿಮಾ ಕೆಲ ವಾರಗಳ ಹಿಂದಷ್ಟೇ ತೆರೆಕಂಡಿತ್ತು. ಆದರೆ, ಚಿತ್ರಮಂದಿರ ಮಾತ್ರ ಖಾಲಿ ಇತ್ತು. ಬುಕ್ ಮೈ ಶೋದವರೂ ರೇಟಿಂಗ್ ವಿಚಾರದಲ್ಲಿ ಏರಿಳಿತ ಮಾಡಿ ಚಿತ್ರಕ್ಕೆ ಬರೆ ಹಾಕಿದ್ದರು. ಅದೆಲ್ಲವನ್ನು ಸಹಿಸಿಕೊಂಡು, ಇದೀಗ ಮತ್ತೆ ಬಂದಿದ್ದಾರೆ ವಿಕಾಸ್.

‘ಒಳ್ಳೆಯ ಸಿನಿಮಾ ಮಾಡಿ ಅಂತಾರೆ, ಮಾಡಿದರೆ ಅಂಥ ಸಿನಿಮಾ ನೋಡಲು ಯಾರೂ ಚಿತ್ರಮಂದಿರಕ್ಕೆ ಬರುತ್ತಿಲ್ಲ. ಕನ್ನಡ ಚಿತ್ರವನ್ನು ಕನ್ನಡಿಗರೇ ನೋಡಲಿಲ್ಲ ಅಂದ ಮೇಲೆ ಮತ್ಯಾರು ನೋಡುತ್ತಾರೆ’ ಎಂದು ಕೊಂಚ ಬೇಸರದಲ್ಲೇ ಮಾತನಾಡಿದರು.

‘ಸಿನಿಮಾ ಹೇಗೆ ಮಾಡಬೇಕೋ ತಿಳಿಯುತ್ತಿಲ್ಲ. ಜನರಿಗೆ ಇಷ್ಟವಾಗುವಂಥ ಚಿತ್ರ ಕೊಟ್ಟರೂ ಚಿತ್ರಮಂದಿರದಲ್ಲಿ ನೋಡುವವರಿಲ್ಲ. ಕನ್ನಡ ಸಿನಿಮಾ ಉಳಿಯಬೇಕು, ಒಳ್ಳೆಯ ಸಿನಿಮಾ ಬರಬೇಕು ಅಂತಾರೆ. ಅಂಥ ಸಿನಿಮಾ ಬಂದಾಗ ಪ್ರೇಕ್ಷಕನೇ ಥಿಯೇಟರ್​ಗೆ ಬರುತ್ತಿಲ್ಲ. ಸಿನಿಮಾದ ಸೋಲು ನಮ್ಮನ್ನೇ ಕಾಣೆಯಾಗುವಂತೆ ಮಾಡಿದೆ. ಒಳ್ಳೇ ಸಿನಿಮಾ ಆಗಿರುವುದರಿಂದ ಎಲ್ಲಿಂದಲೋ ಮತ್ತಷ್ಟು ದುಡ್ಡು ತಂದು ಹಾಕಿ ಮತ್ತಷ್ಟು ದಿನ ಓಡಿಸುತ್ತೇವೆ. ಆಗಲಾದರೂ ಜನ ನೋಡುತ್ತಾರಾ ಗೊತ್ತಿಲ್ಲ’ ಎಂದು ಕಣ್ಣೀರಿಟ್ಟರು ವಿಕಾಸ್. ನಟ ಧರ್ಮಣ್ಣ ಸಹ ಒಳ್ಳೇ ಚಿತ್ರವನ್ನು ಕೈ ಬಿಡಬೇಡಿ ಎಂದರು, ಸೋಮಸಿಂಗ್ ನಿರ್ವಣದ ‘ಕಾಣದಂತೆ ಮಾಯವಾದನು’ ಚಿತ್ರವನ್ನು ರಾಜಪತಿ ಪಟ್ಟಿ ನಿರ್ದೇಶನ ಮಾಡಿದ್ದು, ಸಿನಿಮಾ ಅವಧಿಯಲ್ಲಿ ಹೆಚ್ಚುವರಿ ಏಳು ನಿಮಿಷ ಸೇರಿಸಿ ಬೆಂಗಳೂರಿನ ರಾಕ್​ಲೈನ್ ಮಾಲ್ ಮತ್ತು ಕಾಮಾಕ್ಯ ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net