

ಹರ್ಷವರ್ಧನ್ ಬ್ಯಾಡನೂರು
ಚಿತ್ರ: ಕಮಲ್ ಶ್ರೀದೇವಿ
ನಿರ್ದೇಶನ: ವಿ.ಎ. ಸುನಿಲ್ ಕುಮಾರ್
ತಾರಾಗಣ: ಸಚಿನ್ ಚಲುವರಾಯಸ್ವಾಮಿ, ಸಂಗೀತಾ ಭಟ್, ರಮೇಶ್ ಇಂದಿರ, ಕಿಶೋರ್, ರಾು ಶಿವಮೊಗ್ಗ, ಅತಾ ಬೋಪಯ್ಯ ಮತ್ತಿತರರು
ಅದು ಕೆ.ಆರ್. ಮಾರ್ಕೆಟ್ನಲ್ಲಿರುವ ಎಂಎಂ ಅರ್ಥಾತ್ ಮೈಸೂರು ಮಲ್ಲಿಗೆ ಲಾಡ್ಜ್. ಅದು ಅಡ್ಡದಾರಿ ಹಿಡಿದವರ ಸ್ವರ್ಗ. ವೇಶ್ಯಾವಾಟಿಕೆ, ಇಸ್ಪೀಟು, ಜೂಜಾಡಲು ಬರುವವರೇ ಹೆಚ್ಚು. ಮಧ್ಯವರ್ತಿ ಮಾಮು ಅಲಿಯಾಸ್ ಮಾರೇನಳ್ಳಿ ಮುನಿಸ್ವಾಮಿ (ರಮೇಶ್) ದಂಧೆ ನಡೆಸಲು ದೇವಿಕಾಳನ್ನು (ಸಂಗೀತಾ) ಕರೆತರುತ್ತಾನೆ. ಸಂಗೀತಾಗೆ 70 ಸಾವಿರ ರೂಪಾಯಿ ಬೇಕಿರುತ್ತದೆ. ಮೊದಲ ಸಿನಿಮಾನೇ ಸೋತು ಆತ್ಮಹತ್ಯೆ ದಾರಿ ಹಿಡಿದಿರುವ ನಿರ್ದೇಶಕ ಕಮಲ್ (ಸಚಿನ್), ಮಂತ್ರವಾದಿ, ಕಾದಂಬರಿಗಾರ್ತಿ ನಿಶಾ (ಅಕ್ಷಿತಾ), 19 ವರ್ಷದ ವಿದ್ಯಾರ್ಥಿ, ಸೆಕ್ಯುರಿಟಿ ಕೆಲಸ ಮಾಡುವ 80 ವರ್ಷದ ಮುದುಕ ಮತ್ತು ಇಬ್ಬರು ರೌಡಿಶೀಟರ್ಗಳು ಹೀಗೆ ಏಳು ಜನ ಆಕೆಯನ್ನು ಆ ಲಾಡ್ಜ್ನಲ್ಲಿ ಭೇಟಿಯಾಗುತ್ತಾರೆ. ಅವರು ಬಂದು ಹೋಗುವ ಹೊತ್ತಿಗೆ ದೇವಿಕಾ ಹೆಣವಾಗಿರುತ್ತಾಳೆ. ಹಾಗಾದರೆ ಅದು ಕೊಲೆಯೋ? ಆತ್ಮಹತ್ಯೆಯೋ? ಈ ದೇವಿಕಾ ಯಾರು? ಆಕೆಗೆ ಹಣದ ಅವಶ್ಯಕತೆ ಯಾಕಿರುತ್ತೆ? ವೇಶ್ಯಾವಾಟಿಕೆಯನ್ನೇಕೆ ಆಯ್ಕೆ ಮಾಡಿಕೊಂಡಿರುತ್ತಾಳೆ? ಕೊಲೆಗಾರ ಯಾರು? ಇಂತಹ ಇನ್ನೂ ಅನೇಕ ಪ್ರಶ್ನೆಗಳಿಗೆ ಸಿನಿಮಾದಲ್ಲಿ ಉತ್ತರವಿದೆ.
"ಗಜರಾಮ'ದಲ್ಲಿ ಆ್ಯಕ್ಷನ್ ಕಥೆ ಹೇಳಿದ್ದ ನಿರ್ದೇಶಕ ಸುನಿಲ್ ಕುಮಾರ್, "ಕಮಲ್ ಶ್ರೀದೇವಿ' ಮೂಲಕ ಒಂದೊಳ್ಳೆ ಥ್ರಿಲ್ಲರ್ ನಿರೂಪಿಸಿದ್ದಾರೆ. ಕೇವಲ 122 ನಿಮಿಷಗಳ ಸಿನಿಮಾ ಎಲ್ಲೂ ಬೋರ್ ಆಗದಂತೆ ನೋಡಿಸಿಕೊಂಡು ಹೋಗುತ್ತದೆ. ಕ್ಲೆಮ್ಯಾಕ್ಸ್ವರೆಗೂ ಕೊಲೆಗಾರ ಯಾರು ಎಂಬು ಪ್ರಶ್ನೆಗೆ ಉತ್ತರ ನೀಡದೇ, ಪ್ರೇಕ್ಷಕರಲ್ಲಿ ಒಂದು ಕುತೂಹಲ ಸೃಷ್ಟಿಸಿರುವುದು ಚಿತ್ರಕ್ಕೆ ಪ್ಲಸ್ ಆಗಿದೆ. ಅದಕ್ಕೆ ತಕ್ಕಂತೆ ಪಿಂಪ್ ಮಾಮು ಪಾತ್ರದಲ್ಲಿ ರಮೇಶ್ ಇಂದಿರ ಮತ್ತು ದೇವಿಕಾ ಆಗಿ ಸಂಗೀತಾ ಭಟ್ ಚಿತ್ರದ ಹೈಲೈಟ್. ಅವರು ತಮ್ಮ ಪಾರ್ಮೆನ್ಸ್ ಮೂಲಕವೇ ಚಿತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಚಿತ್ರದ ಕಥಾವಸ್ತು ರಾ ಆಗಿರುವ ಕಾರಣ ಪೋಲಿ ಸಂಭಾಷಣೆ ಮತ್ತು ಬೋಲ್ಡ್ ಸನ್ನಿವೇಶಗಳಿವೆ. "ದಂಧೆ ಕೆಟ್ಟದಾಗಿರಬಹುದು, ಆದರೆ ಮನಸ್ಸು ಶುದ್ಧವಾಗಿದೆ', "ಸುಖ ಪಡೋಕೆ ಅಂತ ಬಂದ ಡೈರೆಕ್ಟರ್, ಕಷ್ಟ ಹೇಳ್ಕೋತಿದಾನೆ'... ಹೀಗೆ ಹಲವು ಒನ್ಲೈನರ್ಗಳಿವೆ. ಎಂದಿನಂತೆ ಖಾಕಿಯಲ್ಲಿ ಕಿಶೋರ್ ಗಮನ ಸೆಳೆಯುತ್ತಾರೆ. ಉಳಿದಂತೆ ಸಚಿನ್, ಅತಾ, ಮಿತ್ರ, ರಾಘು ಶಿವಮೊಗ್ಗ ಸೇರಿ ಇತರರು ಅಚ್ಚುಕಟ್ಟಾಗಿ ಪಾತ್ರಗಳನ್ನು ನಿಭಾಯಿಸಿದ್ದಾರೆ. ಕೀರ್ತನ್ ಹಿನ್ನೆಲೆ ಸಂಗೀತ ಮತ್ತು ನಾಗೇಶ್ ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿವೆ. ಒಂದೊಳ್ಳೆ ಥ್ರಿಲ್ಲರ್ ಡ್ರಾಮಾ ನೋಡಲಿಚ್ಛಿಸುವವರಿಗೆ "ಕಮಲ್ ಶ್ರೀದೇವಿ' ಈ ವಾರದ ಉತ್ತಮ ಆಯ್ಕೆ ಎನ್ನಬಹುದು.