

ಬೆಂಗಳೂರು: ಹಲವು ವರ್ಷಗಳ ಹಿಂದೆ ಗಡಿನಾಡು ಬೀದರ್ನಲ್ಲಿ, ನಿಜಾಮರ ಆಳ್ವಿಕೆ ಇದ್ದ ಕಾಲದಲ್ಲಿ, ಕನ್ನಡ ಭಾಷೆಯ ಬಳಕೆ ವಿರಳವಾಗಿತ್ತು. ಅಂತಹ ಜಾಗದಲ್ಲಿ ಕನ್ನಡ ಶಾಲೆಗಳನ್ನು ಸ್ಥಾಪಿಸಿದವರು ಡಾ. ಚನ್ನಬಸವ ಪಟ್ಟದೇವರು. 'ಆಧುನಿಕ ಬಸವಣ್ಣ' ಎಂದೇ ಕರೆಯಲ್ಪಡುತ್ತಿದ್ದ ಅವರು, ಜಾತಿ-ಬೇಧ ತೊಡೆದುಹಾಕಿ, ಎಲ್ಲೆಡೆ ಸಮಾನತೆಯ ಮಂತ್ರ ಸಾರುತ್ತಾ, ಎಲ್ಲರಿಗೂ ಲಿಂಗದೀಕ್ಷೆ ನೀಡಿದವರು. ಅವರ ಜೀವನದ ಕಥೆ ಈಗ ಚಿತ್ರವಾಗಿದ್ದು, ಈ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: ಇದು ಅದ್ಭುತ ಲೋಕದ ಅವತಾರ: ವಿಜಯವಾಣಿ ಸಿನಿಮಾ ವಿಮರ್ಶೆ
ಈ ಚಿತ್ರದ ಕುರಿತು ಮಾತನಾಡುವ ವಿಷ್ಣುಕಾಂತ್, 'ಇಂತಹ ಚಿತ್ರಗಳನ್ನು ಮಾಡುವಾಗ ಬಹಳ ಅಧ್ಯಯನ ಮಾಡಬೇಕು. ನಾನು ಮೂಲತಃ ಬೀದರ್ನವನಾದ್ದರಿಂದ ಚನ್ನಬಸವರ ಬಗ್ಗೆ ತಿಳಿದುಕೊಂಡಿದ್ದೆ. ಅವರ ಜೀವನವನ್ನು ಅವರ ಹತ್ತಿರದವರಿಂದ, ಕುಟುಂಬದವರಿಂದ ತಿಳಿದುಕೊಂಡು ಚಿತ್ರಕಥೆಯಲ್ಲಿ ಅಳವಡಿಸಿಕೊಂಡಿದ್ದೇನೆ. ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ಸದ್ಯದಲ್ಲೇ ಬಿಡುಗಡೆ ಮಾಡುವ ಯೋಜನೆ ಇದೆ' ಎಂದರು.
ಹಿರಿಯ ನಟಿ ಭವ್ಯ ಅವರು ಜಯದೇವಿ ತಾಯಿ ಲಿಗಾಡೆ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಬಿರಾದಾರ್, ಸಂಜು ಬಸಯ್ಯ, ಕಿಶೋರ್ ಚಕ್ರವರ್ತಿ, ಭರತ್ ವಿಷ್ಣುಕಾಂತ್, ಸಂಜಯ್ ಸೂರಿ ಮುಂತಾದವರು ಉಳಿದ ಪಾತ್ರಗಳಲ್ಲಿ ನಟಿಸಿದ್ದಾರೆ.
ಈ ಸಂದರ್ಭದಲ್ಲಿ ವಿಷ್ಣುಕಾಂತ್, ಭವ್ಯಾ, ವೈಜನಾಥ ಬಿರಾದಾರ್, ಸಂಗೀತ ನಿರ್ದೇಶಕ ಅಭಿಮನ್ ರಾಯ್, ಛಾಯಾಗ್ರಾಹಕ ಗುಂಡ್ಲುಪೇಟೆ ಸುರೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.