

ಹೈದರಾಬಾದ್: ನಟಿ ಕಾಜಲ್ ಅಗರವಾಲ್ ನಟನೆಯ ಸತ್ಯಭಾಮ ಸಿನಿಮಾ ಜೂನ್ 7ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಸುಮನ್ ಚಿಕ್ಕಾಲ ನಿರ್ದೇಶಿಸಿದ್ದು, ಬಾಬಿ ಟಿಕ್ಕ ಮತ್ತು ಶ್ರೀನಿವಾಸ ರಾವ್ ಟಕ್ಕಲಪಲ್ಲಿ ಜಂಟಿಯಾಗಿ ನಿರ್ಮಿಸಿದ್ದಾರೆ. ಕಾಜಲ್ ಅಗರ್ವಾಲ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಬಿಡುಗಡೆಗೆ ಇನ್ನೂ ಎರಡು ದಿನ ಬಾಕಿ ಇದ್ದು, ಈಗಾಗಲೇ ಕಾಜಲ್ ಪ್ರಚಾರ ಆರಂಭಿಸಿದ್ದಾರೆ.
ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಕಾಜಲ್, ದಕ್ಷಿಣ ಚಿತ್ರರಂಗದ ಬಗ್ಗೆ ಅಚ್ಚರಿಯ ಕಾಮೆಂಟ್ ಮಾಡಿದ್ದಾರೆ. ದಕ್ಷಿಣ ಭಾರತದ ಸಿನಿರಂಗದಲ್ಲಿ ಮದುವೆಯಾದ ನಾಯಕಿಯರಿಗೆ ಹಿಂದಿಯಂತೆ ಅವಕಾಶ ಸಿಗುತ್ತಿಲ್ಲ ಎಂದು ಕಾಜಲ್ ಆರೋಪಿಸಿದ್ದಾರೆ.
ಬಾಲಿವುಡ್ ಮತ್ತು ದಕ್ಷಿಣ ಭಾರತ ಸಿನಿ ಇಂಡಸ್ಟ್ರಿ ನಡುವೆ ಬಹಳ ವ್ಯತ್ಯಾಸವಿದೆ. ದಕ್ಷಿಣ ಭಾರತದಲ್ಲಿ ಮದುವೆಯಾದ ನಾಯಕಿಯರಿಗೆ ಅವಕಾಶಗಳು ಕಡಿಮೆ. ಆದರೆ, ಹಿಂದಿಯಲ್ಲಿ ಮದುವೆಯಾದರೂ ಅವಕಾಶಗಳು ಬರುತ್ತವೆ. ಶರ್ಮಿಳಾ ಠಾಕೂರ್‌ನಿಂದ ಆರಂಭವಾಗಿ ಹೇಮ ಮಾಲಿನಿ, ಐಶ್ವರ್ಯ ರೈ, ದೀಪಿಕಾ ಪಡುಕೋಣೆ, ಆಲಿಯಾ ಭಟ್ ಹಾಗೂ ಕಿಯಾರಾ ಅಡ್ವಾಣಿ ನಾಯಕಿಯರಾಗಿ ಅವಕಾಶಗಳನ್ನು ಪಡೆಯುತ್ತಿದ್ದಾರೆ ಎಂದು ಕಾಜಲ್ ಹೇಳಿದರು.
ದಕ್ಷಿಣ ಭಾರತ ಸಿನಿ ರಂಗದಲ್ಲಿ ನಯನತಾರಾರನ್ನು ಹೊರತುಪಡಿಸಿದರೆ ಉಳಿದ ಕಲಾವಿದೆಯರು ಮದುವೆಯಾದ ಬಳಿಕ ತೆರೆಮರೆಗೆ ಸರಿದಿದ್ದಾರೆ. ಅದಕ್ಕೆ ಕಾರಣ ಅವಕಾಶಗಳು ಇಲ್ಲದಿರುವುದು. ಆದರೆ, ನಯನತಾರಾ ಇದನ್ನು ಮೀರಿದ್ದಾರೆ. ಹೀಗಾಗಿ ದಕ್ಷಿಣ ಭಾರತದಲ್ಲೂ ಈ ಸ್ಥಿತಿ ಬೇಗ ಬದಲಾಗಲಿ ಎಂದು ಕಾಜಲ್ ಆಸೆಯನ್ನು ವ್ಯಕ್ತಪಡಿಸಿದರು.
ಅಂದಹಾಗೆ ಕಾಜಲ್ ಲಕ್ಷ್ಮಿ ಕಲ್ಯಾಣಂ ಚಿತ್ರದ ಮೂಲಕ ನಾಯಕಿಯಾಗಿ ಸಿನಿ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಮಗಧೀರ ಚಿತ್ರದ ಮೂಲಕ ಸ್ಟಾರ್ ಹೀರೋಯಿನ್ ಪಟ್ಟ ಪಡೆದರು. ಆರ್ಯ 2, ಡಾರ್ಲಿಂಗ್, ಬಾದ್‌ಶಾ, ಬೃಧಾವನಂ, ಮಿಸ್ಟರ್ ಪರ್ಫೆಕ್ಟ್, ನಾಯಕ್, ಟೆಂಪರ್ ಹಾಗೂ ಬಿಸಿನೆಸ್ ಮ್ಯಾನ್ ಸೇರಿದಂತೆ ಮುಂತಾದ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ಎಲ್ಲಾ ಸ್ಟಾರ್ ಹೀರೋಗಳ ಜೊತೆ ಕಾಜಲ್ ನಟಿಸಿದ್ದಾರೆ. ಇದೀಗ ಕಾಜಲ್ ಮಾಡಿರುವ ಕಾಮೆಂಟ್ ಬಹಳ ಚರ್ಚೆಯಾಗುತ್ತಿದೆ. (ಏಜೆನ್ಸೀಸ್)