ಕೈಲಾಸ ತೋರಿಸಲು ರೆಡಿ; ಯುವ ಪೀಳಿಗೆಯ ಕಥೆಯಲ್ಲಿ ನೂರೆಂಟು ಸಮಸ್ಯೆ

Kailasa
Published on

ಬೆಂಗಳೂರು: ಚಿತ್ರ ಶುರುವಾಗಿ ಕೆಲವೇ ದಿನಗಳಲ್ಲಿ ಕರೊನಾ ಮೊದಲ ಅಲೆ ಶುರುವಾಯಿತಂತೆ. ಅದೆಲ್ಲ ಮುಗಿಸಿ, ಚಿತ್ರವನ್ನು ಮುಂದುವರಿಸಬೇಕು ಎನ್ನುವಷ್ಟರಲ್ಲಿ ನಾಯಕಿ ಬಿಟ್ಟು ಹೋದರಂತೆ. ಈಗ ಚಿತ್ರವೇನೋ ಮುಗಿದಿದೆ. ಆದರೆ, ಸೆನ್ಸಾರ್​ನವರು ರಿವೈಸಿಂಗ್ ಕಮಿಟಿಗೆ ಕಳಿಸಿದ್ದಾರಂತೆ. ಅಲ್ಲಿಂದ ಪ್ರಮಾಣ ಪತ್ರ ಬರುತ್ತಲೇ ಚಿತ್ರ ಬಿಡುಗಡೆ ಮಾಡುವುದಾಗಿ ಹೇಳುತ್ತಾರೆ ನಾಗ್ ವೆಂಕಟ್.

ಅಂದಹಾಗೆ, ಅವರೊಂದು ಚಿತ್ರ ಮಾಡಿದ್ದಾರೆ. ‘ಕೈಲಾಸ - ಕಾಸಿದ್ರೆ’ ಎನ್ನುವುದು ಅದರ ಹೆಸರು. ‘ತಾರಕಾಸುರ’ ಖ್ಯಾತಿಯ ವೈಭವ್ ಈ ಚಿತ್ರದ ನಾಯಕನಾದರೆ, ಸುಕನ್ಯಾ ನಾಯಕಿ. ಅಶ್ವತ್ಥ್ ನೀನಾಸಂ, ಸೂರಜ್ ಮುಂತಾದವರು ನಟಿಸಿರುವ ಈ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ.

ಈ ಸಂದರ್ಭದಲ್ಲಿ ಮಾತನಾಡುವ ವೆಂಕಟ್, ‘ಇಡೀ ದಕ್ಷಿಣ ಭಾರತದಲ್ಲೇ ಇಂಥದ್ದೊಂದು ಕಾನ್ಸೆಪ್ಟ್ ಇರುವ ಚಿತ್ರ ಬಂದಿಲ್ಲ. ಇಂದಿನ ಯುವಜನತೆಯು ದುಶ್ಚಟಗಳಿಗೆ ಬಲಿಯಾಗಿ ಹೇಗೆ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳುವ ಪ್ರಯತ್ನ ಮಾಡಿದ್ದೇನೆ. ಜತೆಗೆ ಇಲ್ಲೊಂದು ಲವ್​ಸ್ಟೋರಿ ಇದೆ. ಕಾಮಿಡಿಗೂ ಬರವಿಲ್ಲ’ ಎಂದು ಹೇಳಿಕೊಳ್ಳುತ್ತಾರೆ.

ಇಷ್ಟಕ್ಕೂ ಸೆನ್ಸಾರ್​ನವರು ಚಿತ್ರವನ್ನು ರಿವೈಸಿಂಗ್ ಕಮಿಟಿಗೆ ಕಳಿಸಿರುವುದೇಕೆ ಎಂದರೆ ಗೊತ್ತಿಲ್ಲ ಎನ್ನುತ್ತಾರೆ ಅವರು. ‘ಯಾವುದೇ ಕಾರಣ ನೀಡಿಲ್ಲ. ಯಾವುದೇ ಕಟ್​ಗಳನ್ನು ಸೂಚಿಸಿಲ್ಲ. ಆದರೂ ಆರ್​ಸಿಗೆ ಕಳುಹಿಸಿದೆ. ಚಿತ್ರಕ್ಕೆ ಪ್ರಮಾಣ ಪತ್ರ ಸಿಗುತ್ತಿದ್ದಂತೆಯೇ, ಚಿತ್ರ ಬಿಡುಗಡೆ ಮಾಡುತ್ತೇವೆ’ ಎನ್ನುತ್ತಾರೆ ವೆಂಕಟ್.

‘ತಾರಕಾಸುರ’ ಚಿತ್ರದ ನಂತರ ಒಂದು ವಿಭಿನ್ನ ಪಾತ್ರ ಸಿಕ್ಕಿದೆ ಎಂದು ಖುಷಿಪಡುತ್ತಾರೆ ವೈಭವ್. ಚಿತ್ರ ವಿಳಂಬವಾದರೂ, ಅನೇಕ ಸಮಸ್ಯೆಗಳು ದಾಟಿದರೂ, ಇದೀಗ ಬಿಡುಗಡೆಗೆ ಸಿದ್ಧವಾಗುತ್ತಿದೆ’ ಎಂದು ಖುಷಿಪಡುತ್ತಾರೆ. ಸುಕನ್ಯಾಗೆ ನಾಯಕಿಯಾಗಿ ಇದು ಮೊದಲ ಚಿತ್ರವಂತೆ. ಅವಕಾಶ ಕೊಟ್ಟಿದ್ದಕ್ಕೆ ಚಿತ್ರತಂಡಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net