

ಗುರುರಾಜ್ ಜಗ್ಗೇಶ್ ನಾಯಕನಾಗಿ ನಟಿಸಿರುವ ‘ಕಾಗೆ ಮೊಟ್ಟೆ’ ಚಿತ್ರತಂಡವು ಖುಷಿಯ ಅಲೆಯಲ್ಲಿದೆ. ಅದಕ್ಕೆ ಕಾರಣ, ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿರುವುದು. ಈ ಸಂತೋಷವನ್ನು ಹಂಚಿಕೊಳ್ಳಲೆಂದೇ ಚಿತ್ರತಂಡದವರು ಮಾಧ್ಯಮದವರೆದುರು ಬಂದಿದ್ದರು. ಈ ಕುರಿತು ಮಾತನಾಡುವ ನಿರ್ದೇಶಕ ಚಂದ್ರಹಾಸ್, ‘ಜನರಿಂದ ಎಂತಹ ಪ್ರತಿಕ್ರಿಯೆ ಸಿಗಬಹುದೋ ಎಂಬ ಭಯ ಆರಂಭದಲ್ಲಿತ್ತು. ದಕ್ಷಿಣ ಕರ್ನಾಟಕ ಮಾತ್ರವಲ್ಲದೆ, ಉತ್ತರ ಕರ್ನಾಟಕದಲ್ಲಿಯೂ ಒಳ್ಳೇ ಪ್ರತಿಕ್ರಿಯೆ ಸಿಗುತ್ತಿದೆ. ಇದು ಹೀಗೆ ಮುಂದುವರಿದರೆ, ಗಳಿಕೆಯಲ್ಲಿಯೂ ಮುಂದುವರಿಯಲಿದ್ದೇವೆ’ ಎನ್ನುತ್ತಾರೆ.
ಅದೇ ರೀತಿ ಚಿತ್ರದ ನಾಯಕ ಗುರುರಾಜ್ ಸಹ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಕೋವಿಡ್ ಸಂದರ್ಭದಲ್ಲಿಯೂ ಜನ ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಒಂದೊಳ್ಳೆಯ ತಂಡದ ಜತೆಗೆ ಸಿನಿಮಾ ಮಾಡಿದ ಖುಷಿ ಇದೆ’ ಎಂದರು. ಛಾಯಾಗ್ರಾಹಕ ಪಿ.ಎಲ್ ರವಿ, ನಟ ಸತ್ಯ, ನಾಯಕಿ ತನುಜಾ ಗೌಡ ಸೇರಿ ಕಲಾವಿದರು ಮತ್ತು ತಂತ್ರಜ್ಞರು ಚಿತ್ರದ ಯಶಸ್ಸಿನ ಬಗ್ಗೆ ಖುಷಿ ವ್ಯಕ್ತಪಡಿಸಿದರು. ಅದೇ ರೀತಿ ಈ ಚಿತ್ರದಲ್ಲಿ ನಟಿಸಿರುವ ಸತ್ಯಜಿತ್ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ, ಒಂದು ಪ್ರದರ್ಶನದ ಗಳಿಕೆಯ ಹಣವನ್ನು ಚಿಕಿತ್ಸೆಗೆ ನೀಡಲು ತಂಡ ತೀರ್ವನಿಸಿದೆ.