'ಕಿಸ್​' ನಾಯಕನಿಂದ ಬಿಡುಗಡೆಯಾಯ್ತು 'ಕಡಲೂರ ಕಣ್ಮಣಿ' ಟೀಸರ್ ...

Kadaloora Kanmani - Final
Published on

ಬೆಂಗಳೂರು: 'ಕಡಲೂರ ಕಣ್ಮಣಿ' ಎಂಬ ಚಿತ್ರವೊಂದು ಸದ್ದಿಲ್ಲದೆ ತಯಾರಿಗೆ ಬಿಡುಗಡೆಗೆ ನಿಂತಿದೆ. ಎಲ್ಲಾ ಅಂದುಕೊಂಡಂತೆ ಆದರೆ, ಚಿತ್ರವು ದಸರಾ ಹಬ್ಬಕ್ಕೆ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಚಿತ್ರದ ಟೀಸರ್​ ಬಿಡುಗಡೆಯಾಗಿದೆ.

ಕಲಾವಿದರ ಸಂಘದಲ್ಲಿ ಬಿಡುಗಡೆಯಾದ 'ಕಡಲೂರ ಕಣ್ಮಣಿ' ಚಿತ್ರದ ಟೀಸರ್​ ಬಿಡುಗಡೆ ಮಾಡುವುದಕ್ಕೆ 'ಕಿಸ್' ಚಿತ್ರದ ನಾಯಕ ವಿರಾಟ್​ ಮುಖ್ಯ ಅತಿಥಿಯಾಗಿ ಬಂದಿದ್ದರು, ಅವರ ಜತೆಗೆ ನಟಿ ನೇಹಾ ಸಕ್ಸೇನಾ ಇದ್ದರು. ಅವರ ಸಮ್ಮುಖದಲ್ಲಿ ಚಿತ್ರದ ಟೀಸರ್​ ಬಿಡುಡೆಯಾಗಿದ್ದಷ್ಟೇ ಅಲ್ಲ, ಹಾಡುಗಳು ಸಹ ಪ್ರದರ್ಶನಗೊಂಡವು.

'ಕಡಲೂರ ಕಣ್ಮಣಿ' ಒಂದು ವಜ್ರವಿದ್ದಂತೆ ಎಂದು ಮಾತು ಶುರು ಮಾಡುವ ನಿರ್ದೇಶಕ ರಾಮ್​ಪ್ರಸನ್ನ ಹುಣಸೂರು, 'ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ದಸರಾ ಹಬ್ಬಕ್ಕೆ ಬಿಡುಗಡೆ ಮಾಡುವ ಪ್ರಯತ್ನ ನಡೆಯುತ್ತಿದೆ. ಟೀಸರ್ ಬಿಡುಗಡೆ ಮಾಡಿಕೊಟ್ಟ ವಿರಾಟ್ ಅವರಿಗೆ ಹಾಗೂ‌ ಚಿತ್ರಕ್ಕೆ ಬಂಡಾವಳ ಹೂಡಿರುವ ನಿರ್ಮಾಪಕರಿಗೆ ನನ್ನ‌‌ ಧನ್ಯವಾದ' ಎಂದು ಹೇಳಿದರು.

ನಾಯಕ ಅರ್ಜುನ್​ ಮಾತನಾಡಿ, 'ಶಿರಸಿಯಿಂದ ಹಲವು ಕನಸನ್ನು ಹೊತ್ತು ಬಂದವನು ನಾನು. ನನ್ನ ಕನಸಿಗೆ ಆಸರೆಯಾದವರು ನಿರ್ದೇಶಕ ರಾಮ್ ಪ್ರಸನ್ನ ಹುಣಸೂರು. ಇಬ್ಬರ ಕನಸು ಸೇರಿ ಈ ಚಿತ್ರವಾಗಿದೆ' ಎಂದರೆ, 'ಈ ಚಿತ್ರದಲ್ಲಿ ಅಂಜು ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಎಲ್ಲರಿಗೂ ನನ್ನ ಪಾತ್ರ ಹಾಗೂ ಚಿತ್ರ ಹಿಡಿಸುತ್ತದೆ ಎಂಬ ಭರವಸೆಯಿದೆ' ಎಂದರು ನಾಯಕಿ ನಿಶಾ ಯಾಲಿನಿ.

'ಕಡಲೂರ ಕಣ್ಮಣಿ' ಚಿತ್ರವನ್ನು ವಿನೋದ್ ರಾಮ್,‌ ಶೈಲೇಶ್ ಆರ್ ಪೂಜಾರಿ ಹಾಗೂ ಬಸವರಾಜ ಗಜ್ಜಿ ನಿರ್ಮಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net