ಹರಾಜಿನಲ್ಲಿ 'ಕಡಲ ತೀರದ ಭಾರ್ಗವ' ಚಿತ್ರದ ಮೊದಲ ಟಿಕೆಟ್​ ಮಾರಾಟ; ಬೆಲೆ ಎಷ್ಟು ಗೊತ್ತಾ?

Kadala Theerada Bhargava - First Ticket
Published on

ಬೆಂಗಳೂರು: ಬಿಡ್ಡಿಂಗ್​ ಮೂಲಕ ಹಲವು ವಸ್ತುಗಳು ಬಿಕರಿಯಾಗುವುದು ಹೊಸ ವಿಷಯವಲ್ಲ. ಆದರೆ, ಸಿನಿಮಾ ಟಿಕೆಟ್​ವೊಂದನ್ನು ಹರಾಜಿನ ಮೂಲಕ ಮಾರಾಟ ಮಾಡುವುದು ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸದು. ಅಂಥದ್ದೊಂದು ಮೊದಲನ್ನು ಇದೀಗ 'ಕಡಲ ತೀರದ ಭಾರ್ಗವ' ಚಿತ್ರತಂಡ ಮಾಡಿದೆ.

'ಕಡಲ ತೀರದ ಭಾರ್ಗವ' ಚಿತ್ರವು ಮಾರ್ಚ್​ ಮೂರರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಇತ್ತೀಚೆಗೆ ಚಿತ್ರದ ಟ್ರೈಲರ್​ ಬಿಡುಗಡೆ ಮಾಡಲಾಗಿದೆ. ಈ ಸಮಾರಂಭದಲ್ಲಿ ಚಿತ್ರದ ಮೊದಲ ಟಿಕೆಟ್​ನ್ನು ಹರಾಜಿಗೆ ಇಡಲಾಗಿದ್ದು, ಟಿಕೆಟ್​ ಬರೋಬ್ಬರಿ ಎರಡು ಲಕ್ಷ ರೂ.ಗಳಿಗೆ ಮಾರಾಟ ಮಾಡಲಾಗಿದೆ. ಹರಾಜು ಪ್ರಕ್ರಿಯೆ 250 ರೂ.ಗಳಿಂದ ಪ್ರಾರಂಭವಾಯಿತು. ಅಂತಿಮವಾಗಿ ಈ ಸಮಾರಂಭಕ್ಕೆ ಅತಿಥಿಯಾಗಿ ಆಗಮಿಸಿದ್ದ ಮೋಹನ್ ರಾಜು ಅವರು 2 ಲಕ್ಷ ರೂಪಾಯಿ ನೀಡಿ ಚಿತ್ರದ ಮೊದಲ ಟಿಕೆಟ್ ಪಡೆದುಕೊಂಡರು. ಕನ್ನಡ ಚಿತ್ರರಂಗದಲ್ಲಿ ಒಂದು ಟಿಕೆಟ್​ ಇಷ್ಟೊಂದು ಬೆಲೆಗೆ ಮಾರಾಟವಾಗುತ್ತಿರುವುದು ಇದೇ ಮೊದಲು ಎನ್ನಬಹುದು.

ಚಿತ್ರದ ನಾಯಕರಲ್ಲೊಬ್ಬರಾಗಿ ವರುಣ್​ ರಾಜು, 'ಈ ಚಿತ್ರದಲ್ಲಿ ಭಾರ್ಗವನಾಗಿ ನಟಿಸಿದ್ದೇನೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಇದೊಂದು ವಿಭಿನ್ನವಾದ ಚಿತ್ರ' ಎಂದರೆ, 'ನಾನು ಭರತ್ ಎಂಬ ಪಾತ್ರದಲ್ಲೇ ಕಾಣಿಸಿಕೊಂಡಿದ್ದೇನೆ. ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಗೆ ಸಿಗುತ್ತಿರುವ ಪ್ರತಿಕ್ರಿಯೆಗೆ ಮನತುಂಬಿ ಬಂದಿದೆ' ಎಂದು ನಾಯಕ‌ ಭರತ್ ಗೌಡ ತಿಳಿಸಿದರು.

'ಕಡಲ ತೀರದ ಭಾರ್ಗವ' ಎಂದರೆ ನೆನಪಿಗೆ ಬರುವುದು ಡಾ. ಶಿವರಾಮ ಕಾರಂತರು. ಈ ಚಿತ್ರಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ ಮತ್ತು ಇದು ಅವರ ಜೀವನವನ್ನಾಧರಿಸಿದ ಚಿತ್ರವಲ್ಲ ಎಂದು ನಿರ್ದೇಶಕ ಪನ್ನಗ ಸೋಮಶೇಖರ್​ ಸ್ಪಷ್ಟಪಡಿಸಿದರು. ಚಿತ್ರಕ್ಕೆ ಅನಿಲ್​ ಸಿ.ಜೆ ಅವರ ಸಂಗೀತ ಮತ್ತು ಕೀರ್ತನ್​ ಪೂಜಾರಿ ಅವರ ಛಾಯಾಗ್ರಹಣವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net