

ಬೆಂಗಳೂರು: ಉಪೇಂದ್ರ ಅಭಿನಯದ ‘ಕಬ್ಜ’ ಸಿನಿಮಾ ಸೆಟ್ಟೇರಿ ಹೆಚ್ಚು ಕಡಿಮೆ ಮೂರು ವರ್ಷವಾಯಿತು. ಇದರಲ್ಲಿ ಎರಡು ವರ್ಷ ಕರೊನಾ ನುಂಗಿ ಹಾಕಿತು. ಇದೀಗ 5ನೇ ಹಂತದ ಚಿತ್ರೀಕರಣಕ್ಕೆ ನಿರ್ದೇಶಕ ಚಂದ್ರು ಚಾಲನೆ ನೀಡಿದ್ದಾರೆ. ಮುಂದಿನ 150 ದಿನಗಳಲ್ಲಿ ಸಿನಿಮಾ ಮುಗಿಸಿ 2022ರಲ್ಲಿ ತೆರೆಗೆ ತರಲಿದ್ದಾರಂತೆ. ಅಷ್ಟೇ ಅಲ್ಲ ಪಾರ್ಟ್ 2 ಸಹ ಸಿದ್ಧವಾಗಲಿದೆಯಂತೆ! ಈ ವಿಚಾರವನ್ನು ಸ್ವತಃ ಚಂದ್ರು ಹೇಳಿಕೊಂಡಿದ್ದಾರೆ.
‘ಎರಡನೇ ಭಾಗದ ಕಥೆ ಸಿದ್ಧವಾಗಿದೆ. ಸದ್ಯದ ಟ್ರೆಂಡ್ ಸಹ ಹಾಗೇ ಇರುವುದರಿಂದ, ಈ ಪ್ರಯತ್ನಕ್ಕೆ ಕೈ ಹಾಕಿದ್ದೇವೆ. ಮೊದಲ ಭಾಗದ ಗೆಲುವಿನ ಮೇಲೆ ಪಾರ್ಟ್ 2 ನಿರ್ಧಾರವಾಗಲಿದೆ’ ಎನ್ನುವ ಅವರು, ಸಿನಿಮಾ ಮೂಡಿ ಬರುತ್ತಿರುವ ಬಗ್ಗೆಯೂ ಮಾಹಿತಿ ನೀಡುತ್ತಾರೆ. ‘ಇಲ್ಲಿಯವರೆಗೂ ಚಿತ್ರದ ಫೋಟೋ ನೋಡಿದ್ದೀರಿ. ದೀಪಾವಳಿಗೆ ದೃಶ್ಯಗಳನ್ನು ನೋಡಲಿದ್ದೀರಿ. ಹಾಲಿವುಡ್ ಮಟ್ಟಕ್ಕೆ ಸಿನಿಮಾ ಸಿದ್ಧವಾಗುತ್ತಿದೆ. ಬಾಲಿವುಡ್ ಪ್ರತಿನಿಧಿಸಲು ಖಳನಾಗಿ ನವಾಬ್ ಷಾ ತಂಡ ಸೇರಿದ್ದಾರೆ. ಚಿತ್ರದಲ್ಲಿ ಅಚ್ಚರಿಯ ಸಾಕಷ್ಟು ವಿಚಾರಗಳಿವೆ. ಶೇ. 50 ಭಾಗದ ಶೂಟಿಂಗ್ ಮುಗಿದಿದೆ’ ಎನ್ನುತ್ತಾರೆ.
ಚಂದ್ರು ಸಾಹಸಕ್ಕೆ ನಟ ಉಪೇಂದ್ರ ಕೈ ಜೋಡಿಸಿದ್ದಾರೆ. ‘ಚಂದ್ರು ಸಿನಿಮಾ ಪ್ಯಾಷನ್ ಗೆ ನನ್ನ ಬೆಂಬಲ ಸದಾ ಇದೆ’ ಎನ್ನುತ್ತಾರೆ. ಅದೇ ರೀತಿ ಖಳನಾಗಿ ಕಾಣಿಸಿಕೊಂಡಿರುವ ನವಾಬ್ ಷಾ, ‘ಉಪೇಂದ್ರ ಅವರ ಜತೆಗೆ ನಟಿಸುತ್ತಿರುವುದು ಮತ್ತು ಪ್ಯಾನ್ ಇಂಡಿಯಾ ಚಿತ್ರದ ಭಾಗವಾಗಿದ್ದಕ್ಕೆ ಖುಷಿಯಿದೆ’ ಎನ್ನುತ್ತಾರೆ.