

ಬೆಂಗಳೂರು: ಚಂದನವನದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಆರ್. ಚಂದ್ರು ನಿರ್ದೇಶನದ ‘ಕಬ್ಜ’ ಸಿನಿಮಾ, ಭಾನುವಾರ ಚಿತ್ರಪ್ರೇಮಿಗಳಿಗೆ ಡಬಲ್ ಉಡುಗೊರೆ ನೀಡಿದೆ. ಅಂದರೆ, ಇಲ್ಲಿಯವರೆಗೂ ನಟ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಅವರ ಪ್ರತ್ಯೇಕ ಲುಕ್ಗಳನ್ನು ‘ಕಬ್ಜ’ ತಂಡ ಬಿಡುಗಡೆ ಮಾಡಿತ್ತು. ಇದೀಗ ಈ ಇಬ್ಬರು ಜತೆಗಿರುವ ಹೊಸ ಲುಕ್ ಅನಾವರಣಗೊಂಡಿದೆ. ಬಿಡುಗಡೆ ಆಗಿರುವ ಪೋಸ್ಟರ್ಗೆ ಸೋಷಿಯಲ್ ಮೀಡಿಯಾದಲ್ಲಿ ಒಳ್ಳೇ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಿರ್ದೇಶಕ ಆರ್. ಚಂದ್ರು ‘ವಿಜಯವಾಣಿ’ಗೆ ಪ್ರತಿಕ್ರಿಯೆ ನೀಡಿದ್ದಾರೆ.
‘ಉಪೇಂದ್ರ ಮತ್ತು ಸುದೀಪ್ ಕಾಂಬೋ ಲುಕ್ ನಿಗದಿಯಂತೆ ಭಾನುವಾರ ಬಿಡುಗಡೆ ಆಗಬೇಕಿತ್ತು. ತಾಂತ್ರಿಕ ಸಮಸ್ಯೆಯಿಂದ ಶನಿವಾರ ತಡರಾತ್ರಿಯೇ ಲುಕ್ ಬಹಿರಂಗವಾಯಿತು. ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಾಲಿವುಡ್ ಮಂದಿಯೂ ಪೋಸ್ಟರ್ಗೆ ಮನಸೋತಿದ್ದಾರೆ’ ಎಂಬುದು ಚಂದ್ರು ಮಾತು. ಈಗಾಗಲೇ ಗೊತ್ತಿರುವಂತೆ ‘ಕಬ್ಜ’ ಸಿನಿಮಾ ಕನ್ನಡ ಸೇರಿ ಏಳು ಭಾಷೆಗಳಲ್ಲಿ ಸಿದ್ಧವಾಗುತ್ತಿದೆ. ಗುಣಮಟ್ಟದ ವಿಚಾರದಲ್ಲಿ ರಾಜಿಯಾಗದೆ, ಅತ್ಯುತ್ತಮವಾದುದನ್ನೇ ತಯಾರಿಸುತ್ತಿದ್ದೇವೆಂದು ನಿರ್ದೇಶಕ ಆರ್.ಚಂದ್ರು ಈ ಹಿಂದೆಯೇ ಹೇಳಿದ್ದರು. ಅದಕ್ಕೆ ತಕ್ಕಂತೆ ಕೋಟ್ಯಂತರ ರೂ. ವೆಚ್ಚದಲ್ಲಿ 80ರ ಕಾಲಘಟ್ಟವನ್ನು ಬಿಂಬಿಸುವ ಸೆಟ್ ಹಾಕಿ ಚಿತ್ರೀಕರಣ ಮಾಡಿದ್ದರು.
‘ಮಳೆ ಮತ್ತು ಲಾಕ್ಡೌನ್ ಹಿನ್ನೆಲೆಯಲ್ಲಿ ಮಿನರ್ವ ಮಿಲ್ನಲ್ಲಿನ ಒಂದಷ್ಟು ಸೆಟ್ಗಳು ಹಾಳಾಗಿವೆ. ಮತ್ತೆ ಸೆಟ್ ನಿರ್ಮಾಣ ಕೆಲಸ ನಡೆಯುತ್ತಿದೆ. ಇಲ್ಲಿಯವರೆಗೂ 70 ಭಾಗದ ಚಿತ್ರೀಕರಣ ಮುಗಿದಿದೆ. ಜುಲೈ 10ರಿಂದ ಬಾಕಿ ಶೂಟಿಂಗ್ ಆರಂಭವಾಗಲಿದೆ. ಸುದೀಪ್, ಪ್ರಕಾಶ್ ರೈ ಸೇರಿ ನಾಯಕಿಯೂ ಪಾಲ್ಗೊಳ್ಳಲಿದ್ದಾರೆ’ ಎನ್ನುತ್ತಾರೆ ನಿರ್ದೇಶಕರು. ಎ.ಜೆ ಶೆಟ್ಟಿ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ, ಶಿವಕುಮಾರ್ ಕಲಾ ನಿರ್ದೇಶನ ಚಿತ್ರಕ್ಕಿದೆ.