

ಬೆಂಗಳೂರು: ಬಹುನಿರೀಕ್ಷಿತ ಕಬ್ಜ ಸಿನಿಮಾ ನಾಳೆ ವಿಶ್ವದಾದ್ಯಂತ ಬಿಡುಗಡೆ ಹಿನ್ನೆಲೆಯಲ್ಲಿ ಕಬ್ಜ ತಂಡ ಟೆಂಪಲ್ ರನ್ ಶುರು ಮಾಡಿದೆ. ಸಿನಿಮಾಗೆ ಯಾವುದೇ ಅಡೆತಡೆ ಇಲ್ಲದೆ ಭರ್ಜರಿ ಓಪನಿಂಗ್ ಸಿಕ್ಕಿ, ಯಶಸ್ವಿಯಾಗಲೆಂದು ಸಿನಿಮಾ ತಂಡ ದೇವರ ಮೊರೆ ಹೋಗಿದ್ದಾರೆ.
ನಾಳೆ ಪುನೀತ್ ರಾಜ್ಕುಮಾರ್ ಅವರ ಹುಟ್ಟುಹಬ್ಬ ಕೂಡ ಹೌದು. ಇದರ ಜೊತೆಗೆ ಉಪೇಂದ್ರ ನಟನೆಯ ಹಾಗೂ ಕಿಚ್ಚ ಸುದೀಪ್ ಮತ್ತು ಶಿವರಾಜ್ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸಿರುವ ಬಹುನಿರೀಕ್ಷಿತ ಕಬ್ಜ ಬಿಡುಗಡೆಯಾಗುತ್ತಿದೆ. ಅಭಿಮಾನಿಗಳ ಪಾಲಿಗೆ ಈ ದಿನ ವಿಶೇಷವಾಗಿದ್ದು, ನಾಳೆ ಕಬ್ಜ ಸಿನಿಮಾ ಭರ್ಜರಿ ಓಪನಿಂಗ್ ಪಡೆದುಕೊಳ್ಳುವುದು ಗ್ಯಾರೆಂಟಿ ಎನ್ನಲಾಗುತ್ತಿದೆ.
ಸದ್ಯ ಸಿನಿಮಾ ತಂಡ ಬಿಡುಗಡೆಗು ಮುನ್ನ ವಿಮಾನ ಏರಿ ತಿರುಪತಿಗೆ ಹೊರಟಿದೆ. ರಿಯಲ್ ಸ್ಟಾರ್ ಉಪ್ಪಿ, ನಿರ್ದೇಶಕ ಆರ್ ಚಂದ್ರು ಹಾಗೂ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಮತ್ತು ಅವರ ಆಪ್ತ ಬಳಗ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಲಿದೆ. ತಿರುಪತಿಗೆ ಹೊರಡುವ ಮುನ್ನ ಕಬ್ಜ ತಂಡ ವಿಶೇಷ ವಿಮಾನದ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದೆ.
ನಾಳೆ ಬೆಳಗ್ಗೆ ಕಬ್ಜ ತೆರೆಗೆ ಬರಲಿದೆ. ವಿಶ್ವದಾದ್ಯಂತ ಸುಮಾರು 4000 ಚಿತ್ರಮಂದಿರಗಳಲ್ಲಿ ಕಬ್ಜ ಬಿಡುಗಡೆಯಾಗಲಿದೆ. (ದಿಗ್ವಿಜಯ ನ್ಯೂಸ್)