More

    ಸೋಮಣ್ಣ ಬಿಸಿ ತಣಿಸಿದ ಹೈಕಮಾಂಡ್: ದಿಲ್ಲಿ ಯಾತ್ರೆ ಸಕ್ಸಸ್, ವರಿಷ್ಠರಿಂದ ಸಮಾಧಾನ; ಮತ್ತೆ ಸ್ಪರ್ಧೆ ಖಚಿತ

    | ರಾಘವ ಶರ್ಮ ನಿಡ್ಲೆ ನವದೆಹಲಿ

    ಪಕ್ಷದಲ್ಲಿ ತಮಗೆ ಕೆಲಸ ಮಾಡಲು ಬಿಡುತ್ತಿಲ್ಲ ಮತ್ತು ಚಾಮರಾಜನಗರ ಜಿಲ್ಲೆ ಉಸ್ತುವಾರಿಯಾಗಿದ್ದರೂ ವಿನಾಕಾರಣ ಹಸ್ತಕ್ಷೇಪ ಮಾಡಿ, ತಮ್ಮ ಜನಪ್ರಿಯತೆ ಕುಸಿಯುವಂತೆ ಮಾಡುತ್ತಿದ್ದಾರೆಂದು ಮಾಜಿ ಸಿಎಂ ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರ ವಿರುದ್ಧ ಅಸಮಾಧಾನಗೊಂಡು ಕುದಿಯುತ್ತಿದ್ದ ವಸತಿ ಸಚಿವ ವಿ. ಸೋಮಣ್ಣ ಅವರನ್ನು ಬಿಜೆಪಿಯ ದಿಲ್ಲಿ ವರಿಷ್ಠರು ಸಮಾಧಾನಪಡಿಸಿದ್ದಾರೆ. ಗೃಹ ಸಚಿವ ಅಮಿತ್ ಷಾ ಮತ್ತು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಧಮೇಂದ್ರ ಪ್ರಧಾನ್ ಅವರನ್ನು ಭೇಟಿ ಮಾಡಿದ ಸೋಮಣ್ಣ, ಹಲವು ಕ್ಷೇತ್ರಗಳಲ್ಲಿ ಪಕ್ಷದ ಗೆಲುವಿಗಾಗಿ ಶ್ರಮಿಸಿದ ಮೇಲೂ ನಾನು ಈ ಪರಿ ಅವಮಾನ ಅನುಭವಿಸಬೇಕು ಎಂದರೆ ಯಾವ ಕಾರಣಕ್ಕೆ ಇರಬೇಕು? ಹೀಗಾಗಿಯೇ, ಕೆಲ ದಿನಗಳಿಂದ ಎಲ್ಲ ಚಟುವಟಿಕೆಗಳಿಂದ ದೂರವಿದ್ದೆ ಎಂದು ಅಮಿತ್ ಷಾ ಹಾಗೂ ಪ್ರಧಾನ್​ಗೆ ವಿವರಿಸಿದ್ದಾರೆ.

    ಇದಕ್ಕೆ ಪ್ರತಿಕ್ರಿಯಿಸಿರುವ ಇಬ್ಬರು ನಾಯಕರು, ನೀವು ಮಾಡುತ್ತಿರುವ ಕೆಲಸ ಮುಂದುವರಿಸಿ. ಪಕ್ಷಕ್ಕೆ ನೀವು ಎಷ್ಟು ಮಹತ್ವ ಎನ್ನುವುದು ನಮಗೆ ಗೊತ್ತಿದೆ. ನಿಶ್ಚಿಂತೆಯಿಂದ ಕೆಲಸ ಮಾಡಿ ಎಂದು ಭರವಸೆ ತುಂಬಿದ್ದಾರೆ. ಅಮಿತ್ ಷಾ ಭೇಟಿ ಬಳಿಕ ಸಮಾಧಾನಗೊಂಡ ಸೋಮಣ್ಣ, ದಿಲ್ಲಿಗೆ ಬಂದ ಉದ್ದೇಶ ಈಡೇರಿದೆ ಎಂದು ಆಪ್ತರೊಂದಿಗೆ ಹೇಳಿಕೊಂಡಿದ್ದಾರೆ. ಈ ಮೂಲಕ ಸೋಮಣ್ಣ ಬಿಜೆಪಿಯಿಂದಲೇ ಗೋವಿಂದರಾಜ ನಗರ ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧಿಸುವುದು ಖಚಿತವಾಗಿದೆ. ಸೋಮಣ್ಣ ಅವರಿಗೆ ಗೋವಿಂದರಾಜ ನಗರ ಕ್ಷೇತ್ರದ ಜತೆಗೆ ಚಾಮರಾಜನಗರ ಜಿಲ್ಲೆಯಲ್ಲೂ ತಮ್ಮ ಪ್ರಭಾವಳಿ ವೃದ್ಧಿಸಿ ಜನಪ್ರಿಯ ನಾಯಕರಾಗಬೇಕು ಎಂಬ ಆಶಯವಿದೆ. ಆದರೆ, ಇದಕ್ಕೆ ತಮ್ಮ ಆಪ್ತ ಕುಟುಂಬದಿಂದಲೇ ಅಡ್ಡಿಯಾಗಿರುವುದು ವಿಪರೀತ ಆಕ್ರೋಶಕ್ಕೆ ಕಾರಣವಾಗಿದೆ. ಮೇಲಾಗಿ, ಪುತ್ರ ಅರುಣ್ ಸೋಮಣ್ಣರನ್ನು ರಾಜಕೀಯವಾಗಿಯೂ ಬೆಳೆಯಲು ಬಿಡುತ್ತಿಲ್ಲ. 15 ವರ್ಷಗಳಿಂದ ಈ ನೋವನ್ನು ಅನುಭವಿಸುತ್ತಾ ಬಂದಿದ್ದೇನೆ ಎಂದು ಸೋಮಣ್ಣ ದಿಲ್ಲಿಯಲ್ಲಿ ತಮ್ಮ ಆಪ್ತರೊಂದಿಗೆ ಹೇಳಿಕೊಂಡಿದ್ದಾರೆ. ಈ ನಡುವೆ ಸೋಮಣ್ಣ ಪುತ್ರ ಅರುಣ್​ಗೆ ಪಕ್ಷದ ಸಂಘಟನೆಯಲ್ಲಿ ಬಡ್ತಿಯ ಭರವಸೆ ಸಿಕ್ಕಿದೆ ಎಂದು ಮೂಲಗಳಿಂದ ಗೊತ್ತಾಗಿದೆ.

    ಜೋಶಿ ಮಧ್ಯಸ್ಥಿಕೆ: ಸೋಮಣ್ಣ ದಿಲ್ಲಿಗೆ ಬರುವ ಮುನ್ನವೇ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಜತೆ ಮಾತನಾಡಿ, ದೆಹಲಿಗೆ ಬರುವ ಬಗ್ಗೆ ಮಾಹಿತಿ ನೀಡಿದ್ದರು. ಜೋಶಿ-ಸೋಮಣ್ಣ ನಡುವೆ ಉತ್ತಮ ಒಡನಾಟವಿದ್ದು, ಧಮೇಂದ್ರ ಪ್ರಧಾನ್ ಮತ್ತು ಅಮಿತ್ ಷಾರನ್ನು ಸೋಮಣ್ಣ ಅವರು ಜೋಶಿ ಮೂಲಕವೇ ಭೇಟಿ ಮಾಡಿದ್ದಾರೆ. ವರಿಷ್ಠರನ್ನು ಭೇಟಿಯಾದಾಗ ಜೋಶಿ ಕೂಡ ಅಲ್ಲಿ ಉಪಸ್ಥಿತರಿದ್ದರು.

    ನಡ್ಡಾ ಕಾರ್ಯಕ್ರಮಕ್ಕೂ ಗೈರು: ರಾಜ್ಯ ಬಿಜೆಪಿ ಹಿರಿಯ ನಾಯಕರ ವರ್ತನೆಯಿಂದ ಆಕ್ರೋಶಗೊಂಡಿದ್ದ ಸೋಮಣ್ಣ, ಅದೇ ಕಾರಣಕ್ಕಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಚಾಮರಾಜನಗರ ಕಾರ್ಯಕ್ರಮದಿಂದ ದೂರ ಉಳಿದಿದ್ದರು. ಸಿಎಂ ಬೊಮ್ಮಾಯಿ ಆಹ್ವಾನ ನೀಡಿದ್ದರೂ ಸೋಮಣ್ಣ ಅದಕ್ಕೆ ಸೊಪ್ಪು ಹಾಕಿರಲಿಲ್ಲ.

    ಮಗನ ಕುರಿತ ನಿರ್ಲಕ್ಷ್ಯಕ್ಕೂ ಸಿಟ್ಟು: ಯಡಿಯೂರಪ್ಪನವರ ಪುತ್ರ ವಿಜಯೇಂದ್ರರಂತೆ ತನ್ನ ಪುತ್ರ ಅರುಣ್ ಕೂಡ ಬಿಜೆಪಿಯಲ್ಲಿ ಬೆಳೆಯಬೇಕು ಎನ್ನುವುದು ಸೋಮಣ್ಣ ಬಯಕೆ. ಆದರೆ, ಇದಕ್ಕೆ ಅಡ್ಡಗಾಲು ಹಾಕುವ ಕೆಲವರ ನಡೆ ಅವರ ಆಕ್ರೋಶ ದುಪ್ಪಟ್ಟು ಮಾಡಿದೆ. ಇದನ್ನು ಕೂಡ ಸೋಮಣ್ಣ ಹೈಕಮಾಂಡ್​ಗೆ ವಿವರಿಸಿದ್ದಾರೆ. ಈ ಬಾರಿ ಮಗನಿಗೆ ಟಿಕೆಟ್ ನೀಡಬೇಕು ಎಂದು ಸೋಮಣ್ಣ ರಾಜ್ಯ ಬಿಜೆಪಿ ನಾಯಕರ ಮುಂದೆ ಹೇಳಿದ್ದಾರೆಂಬ ಚರ್ಚೆಗಳಿದ್ದರೂ, ದಿಲ್ಲಿಯಲ್ಲಿ ಮಾತಿಗೆ ಸಿಕ್ಕ ಸೋಮಣ್ಣ ಈ ಊಹಾಪೋಹಗಳನ್ನು ತಳ್ಳಿಹಾಕಿದ್ದಾರೆ.

    ದಿಲ್ಲಿಯಲ್ಲಿ ಬಂದ ಕೆಲಸ ಆಗಿದೆ

    ನವದೆಹಲಿ: ದೆಹಲಿಯಲ್ಲಿ ನಾನು ಬಂದ ಕೆಲಸ ಆಗಿದ್ದು, ಯಾವುದೇ ಸಮಸ್ಯೆ ಇಲ್ಲದೇ ಕೆಲಸ ಆಗಿದೆ. ಇಲಾಖೆ ಕೆಲಸದ ವಿಚಾರವಾಗಿ ದೆಹಲಿಗೆ ಬಂದಿದ್ದೆ. ಅದರ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದೇನೆ ಎಂದು ವಸತಿ ಸಚಿವ ಸೋಮಣ್ಣ ಹೇಳಿದ್ದಾರೆ.

    ದೆಹಲಿಯಲ್ಲಿ ಸಂಸತ್​ನಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತು ಕರ್ನಾಟಕ ಬಿಜೆಪಿ ಚುನಾವಣೆ ಉಸ್ತುವಾರಿ ಧಮೇಂದ್ರ ಪ್ರಧಾನ್ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ವೈಯಕ್ತಿಕ ಕೆಲಸಕ್ಕೆಂದು ಬಂದಿದ್ದಲ್ಲ. ಸರ್ಕಾರ, ಪಾರ್ಟಿ ಕೆಲಸಕ್ಕೆ ಬಂದೆ. ಅಮಿತ್ ಷಾ ಭೇಟಿ ಮಾಡುವ ಯಾವುದೇ ಉದ್ದೇಶವಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

    ಯಡಿಯೂರಪ್ಪ ಕರೆದರೆ ಹೋಗುವೆ: ವಿಜಯೇಂದ್ರರ ವಯಸ್ಸು ಎಷ್ಟು ನಂದು ಎಷ್ಟು? ನಂಗೆ ಅವರಿಗೆ ಯಾಕೆ ಹೋಲಿಕೆ ಮಾಡ್ತೀರಿ? ಅವರಿಗೆ ನನ್ನ ಬಗ್ಗೆ ಏನು ಅನಿಸಿಕೆ ಇದೆಯೋ ಗೊತ್ತಿಲ್ಲ. ಅಷ್ಟಕ್ಕೂ ಯಾರು ವಿಜಯೇಂದ್ರ? ಮಾಜಿ ಸಿಎಂ ಯಡಿಯೂರಪ್ಪ ಅವರ ಮಗ ಎಂದು ಗೌರವದಿಂದ ನೋಡುತ್ತೇನೆ. ನನ್ನ ಮಗ ಮತ್ತು ವಿಜಯೇಂದ್ರ ಮಧ್ಯೆ ಏನಾಗಿದೆಯೋ ಗೊತ್ತಿಲ್ಲ. ಏನು ಗೊಂದಲ ಇದೆಯೋ ಅದನ್ನ ಅವರ ಬಳಿ ಕೇಳಿ. ನನ್ನ ಬಳಿ ಏಕೆ ಕೇಳುತ್ತೀರಿ ಎಂದು ಸೋಮಣ್ಣ ಅಸಮಾಧಾನ ಹೊರಹಾಕಿದರು. ಬಿಎಸ್​ವೈ ಕುಟುಂಬದ ಜತೆಗಿನ ಅತೃಪ್ತಿ ಬಗ್ಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ಕರೆದರೆ ನಾನು ಮಾತನಾಡಲು ಹೋಗುವೆ. ಇದುವರೆಗೆ ಅವರು ನನ್ನ ಕರೆದಿಲ್ಲ . 45 ವರ್ಷದಿಂದ ಜನಸೇವೆ ಮಾಡಿದ್ದೇನೆ. ನನಗೆ ಯಾವುದೇ ವ್ಯಾಮೋಹ ಇಲ್ಲ ಎಂದರು. ಸಿದ್ಧಗಂಗಾ ಮಠದ ಜತೆಗೆ ನಿಮಗೆ ಮನಸ್ತಾಪ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನಗೂ ಮಠಗಳಿಗೂ 50 ವರ್ಷದ ಸಂಬಂಧವಿದೆ. ಹಿಂದಿನ ಸ್ವಾಮೀಜಿ ಇದ್ದಾಗ, ಆ ಮಠಕ್ಕೆ ಏನು ಬೇಕಿದ್ದರೂ ಸೋಮಣ್ಣ ಮಾಡುತ್ತಿದ್ದ. ಈಗ ದೊಡ್ಡ ಸ್ವಾಮಿಗಳು ಇಲ್ಲ. ನಾನು ತೃಣಕ್ಕೆ ಸಮಾನ. ಜಗತ್ತಲ್ಲಿ ಯಾರೂ ಶಾಶ್ವತರಲ್ಲ. ಅಲ್ಲಿನ ಕಾರ್ಯಕ್ರಮಕ್ಕೆ ಹೋಗದೆ ಇದ್ದದ್ದು ನನ್ನ ವೈಯಕ್ತಿಕ ತೀರ್ಮಾನ ಎಂದು ತಿಳಿಸಿದರು.

    ಮಠ ಮಾನ್ಯಗಳ ಬಗ್ಗೆ ಅಪಾರ ಗೌರವ ಇದೆ. ನನ್ನ ಜೀವನವೇ ಅದರ ಜತೆ ಬೆರೆತು ಹೋಗಿದೆ. ವೀರಶೈವ ಧರ್ಮಕ್ಕೆ ಶತಮಾನಗಳ ಇತಿಹಾಸವಿದೆ. ಇನ್ನೊಬ್ಬರ ಬಗ್ಗೆ ದ್ವೇಷ ಮಾಡಬೇಡಿ ಎನ್ನುವುದು ನಾನು ಕಲಿತುಕೊಂಡ ಧರ್ಮ ಎಂದ ಸೋಮಣ್ಣ, ಯಡಿಯೂರಪ್ಪ ಅವರ ಬಗ್ಗೆ ನನಗೆ ಸಿಟ್ಟಿಲ್ಲ. ನನ್ನದು ಯಡಿಯೂರಪ್ಪನವರದ್ದು ತಂದೆ ಮಗ ಸಂಬಂಧ. ನಾನು ಸತ್ಯ ಮಾತಾಡ್ತೇನೆ. ಒಮ್ಮೊಮ್ಮೆ ಅದು ಕಹಿ ಆಗುತ್ತೆ. ಅವರ ಬಗ್ಗೆ ದ್ವೇಷ ಮಾಡಿ ನಂಗೆ ಏನು ಲಾಭ ಎಂದು ಪ್ರಶ್ನಿಸಿದರು.

    ಗೆಲ್ಲುವ ಪಕ್ಷದಲ್ಲಿ ಟಿಕೆಟ್​ಗಾಗಿ ಪೈಪೋಟಿ ಇರುವುದು ಸಹಜ. ನಮ್ಮ ಪಕ್ಷದ ನಾಯಕರು ಯಾರಿಗೆ ಟಿಕೆಟ್ ನೀಡಬೇಕು ಎನ್ನುವುದನ್ನು ನಿರ್ಧರಿಸುವುದಕ್ಕೆ ಸಮರ್ಥರಿದ್ದಾರೆ. ವಿ. ಸೋಮಣ್ಣ ಅಮಿತ್ ಷಾ ಅವರನ್ನು ಭೇಟಿಯಾಗಿ ಬರಲಿದ್ದಾರೆ.

    | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

    ಸಚಿವ ವಿ. ಸೋಮಣ್ಣ ಅವರು ದೆಹಲಿಗೆ ಬೇರೆ ಕಾರಣಕ್ಕಾಗಿ ಹೋಗಿದ್ದಾರೆ. ಯಾವುದೇ ಕಾರಣಕ್ಕೂ ಅವರು ಪಕ್ಷ ಬಿಡಲ್ಲ. ಆ ಭಾಗದಲ್ಲಿ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ಸೋಮಣ್ಣ ನಮ್ಮ ಜತೆಗೆ ಇರುತ್ತಾರೆ. ಎಲ್ಲ ಕಡೆಗೂ ಅವರಿಗೆ ಗೌರವವಿದೆ. ಅವರ ಸಹಕಾರದಿಂದಲೇ ನಾವು ಅಧಿಕಾರಕ್ಕೆ ಬರುತ್ತೇವೆ.

    | ಬಿ.ಎಸ್.ಯಡಿಯೂರಪ್ಪ ಮಾಜಿ ಸಿಎಂ

    ಬಿಎಸ್​ವೈ ನಾಯಕತ್ವ ಪ್ರಶ್ನಿಸಿರುವವರು ಎಚ್ಚರದಿಂದಿರಿ

    ರಾಣೆಬೆನ್ನೂರ: ಬಿ.ಎಸ್. ಯಡಿಯೂರಪ್ಪ ಅವರು ಪಕ್ಷದ ಸಿದ್ಧಾಂತಕ್ಕೆ ಬೆಲೆ ಕೊಟ್ಟು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವವರು. ಅದು ಅವರ ದೌರ್ಬಲ್ಯ ಎಂದು ತಿಳಿದುಕೊಂಡವರಿಗೆ ಈ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡುತ್ತೇವೆ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

    ನಗರದ ಹವಾಲ್ದಾರ್ ಹೊಂಡದ ಬಳಿ ಬುಧವಾರ ಏರ್ಪಡಿಸಿದ್ದ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಬಿಎಸ್​ವೈ ಪಕ್ಷದ ಫೌಂಡೇಷನ್ ಹಾಕಿದವರು. ಕುಟುಂಬ ಬೆಳೆಸಲು ಅವರು ಓಡಾಡುತ್ತಿಲ್ಲ. ಪಕ್ಷ ಕಟ್ಟಿ ಬೆಳೆಸಲು ಓಡಾಡುತ್ತಿದ್ದಾರೆ. ಅಲ್ಲದೆ ನಾನೇ ಪಕ್ಷ ಸಂಘಟನೆ ಮಾಡಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವೆ ಎನ್ನುತ್ತಿದ್ದಾರೆ. ಈ ಎದೆಗಾರಿಕೆ ಯಾರಿಗಾದರೂ ಇದೆಯಾ ಎಂದು ಬಿ.ವೈ. ವಿಜಯೇಂದ್ರ ಪ್ರಶ್ನಿಸಿದರು. ಅವರ ನಾಯಕತ್ವ ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. 81ನೇ ವಯಸ್ಸಿನಲ್ಲೂ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಅವರನ್ನು ಟೀಕಿಸುವವರಿಗೆ ತಕ್ಕ ಉತ್ತರ ನೀಡಲಾಗುವುದು ಎಂದರು. ಬಿಎಸ್​ವೈ ಕುಟುಂಬ ಸದಸ್ಯರ ಕುರಿತು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ, ಸಚಿವ ಸೋಮಣ್ಣ ಪುತ್ರ ಸೇರಿದಂತೆ ಕೆಲವರು ಹೇಳಿಕೆ ನೀಡಿರುವ ಸಂದರ್ಭದಲ್ಲಿ ಬಿ.ವೈ.ವಿಜಯೇಂದ್ರ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts