ತುಳುನಾಡ ದೈವ 'ಕೊರಗಜ್ಜ' ಕುರಿತಾದ ಚಿತ್ರದಲ್ಲಿ ಕಬೀರ್ ಬೇಡಿ …

Kari Haida - Kari Ajja 1
Published on

ಬೆಂಗಳೂರು: ಇತ್ತೀಚೆಗಷ್ಟೇ 'ಹಂಟರ್​' ಎಂಬ ಚಿತ್ರದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಭಾರತೀಯ ನಟ ಕಬೀರ್​ ಬೇಡಿ ನಟಿಸುತ್ತಾರೆ ಎಂಬ ಸುದ್ದಿ ಇತ್ತು. ಈಗ ಆ ಚಿತ್ರ ಬಿಡುಗಡೆಗೂ ಮುನ್ನವೇ, ಅದೇ ನಿರ್ಮಾಪಕರ ಇನ್ನೊಂದು ಚಿತ್ರದಲ್ಲಿ ಕಬೀರ್​ ಬೇಡಿ ಸದ್ದಿಲ್ಲದೆ ನಟಿಸಿದ್ದು, ಈಗಾಗಲೇ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಆ ಚಿತ್ರದ ಹೆಸರು 'ಕರಿ ಹೈದ ...ಕರಿ ಅಜ್ಜ ...'.

'ಹಂಟರ್​' ಚಿತ್ರವನ್ನು ನಿರ್ಮಿಸುತ್ತಿರುವ ತ್ರಿವಿಕ್ರಮ ಸಫಲ್ಯ ಅವರೇ ಇದೀಗ 'ಕರಿ ಹೈದ ...ಕರಿ ಅಜ್ಜ ...' ಚಿತ್ರವನ್ನೂ ನಿರ್ಮಿಸುತ್ತಿದ್ದು, ಈ ಚಿತ್ರವನ್ನು ಸುಧೀರ್​ ಅತ್ತಾವರ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಬೆಳ್ತಂಗಡಿ ಸುತ್ತಮುತ್ತ ಶೇ.80ರಷ್ಟು ಚಿತ್ರೀಕರಣ ಮುಗಿದಿದ್ದು, ಇನ್ನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಸಂಪೂರ್ಣವಾಗಲಿದೆ.

ಈ ಚಿತ್ರದ ಕುರಿತು ಮಾತನಾಡುವ ಸುಧೀರ್​, 'ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಅವರ ಕುಟುಂಬದವರಿಗೆ ಕೊರಗಜ್ಜನ ಕುರಿತಾದ ಚಿತ್ರ ಮಾಡುವ ಹಂಬಲವಿತ್ತು. ಈ ಕಥೆ ಮೆಚ್ಚಿ ಅವರು ನಿರ್ಮಾNಕ್ಕೆ ಮುಂದಾದರು. ಕೊರಗಜ್ಜನ ಜೀವನದ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿ, ಕೊರಗಜ್ಜನ ಜನಾಂಗದವರೊಂದಿಗೆ ಚರ್ಚೆ ಮಾಡಿ, 12ನೇ ಶತಮಾನದಲ್ಲಿದ್ದ ಕೊರಗಜ್ಜನ ಬಗ್ಗೆ ಯಾರಿಗೂ ಗೊತ್ತಿರದ ಹಲವು ವಿಷಯಗಳನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ. ಭರತ್ ಸೂರ್ಯ 'ಕೊರಗಜ್ಜ'ನ ಪಾತ್ರದಲ್ಲಿ ಕಾಣಿಸಿಕೊಳುತ್ತಿದ್ದಾರೆ. ಕಬೀರ್ ಬೇಡಿ, ಶೃತಿ, ಭವ್ಯ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ವಿದ್ಯಾಧರ್ ಶೆಟ್ಟಿ ಸಂಕಲನ, ಪವನ್ ವಿ ಕುಮಾರ್ ಮತ್ತು ಗಣೇಶ್ ಕೆಳಮನೆ ಛಾಯಾಗ್ರಹಣ, ಸುಧೀರ್-ಕೃಷ್ಣ ರವಿ ಸಂಗೀತ ಈ ಚಿತ್ರಕ್ಕಿದೆ' ಎಂದು ಮಾಹಿತಿ ಕೊಡುತ್ತಾರೆ.

ಈ ಚಿತ್ರದಲ್ಲಿ ನಟಿಸಿದ್ದು ಖುಷಿಯಾಗಿದೆ ಎಂದೇ ಮಾತು ಪ್ರಾರಂಭಿಸುವ ಕಬೀರ್​ ಬೇಡಿ, 'ಕೊರಗಜ್ಜ ದೈವದ ಕುರಿತಾದ ಈ ಚಿತ್ರದಲ್ಲಿ ರಾಜನ ಪಾತ್ರ ನನ್ನದು. ಶೃತಿ, ಭವ್ಯ, ಭರತ್ ಸೂರ್ಯ ಮುಂತಾದ ಕಲಾವಿದರ ಜೊತೆ ಅಭಿನಯಿಸಿದ್ದೇನೆ. ಇದೊಂದು ನೆಗೆಟಿವ್​ ಪಾತ್ರವಾದರೂ, ಬಹಳ ಪವರ್​ಫುಲ್​ ಆದ ಪಾತ್ರ ನನ್ನದು. ಕಥೆ ಕೇಳಿ ಖುಷಿಯಾಯಿತು. ನನ್ನ ಪಾತ್ರಕ್ಕೆ ನಾನೇ ಡಬ್​ ಮಾಡುತ್ತಿದ್ದೇನೆ' ಎನ್ನುತ್ತಾರೆ.

ಕಬೀರ್ ಬೇಡಿ ಅವರಂತಹ ಮಹಾನ್ ನಟನ ಜೊತೆ ಅಭಿನಯಿಸಿದ್ದು ತುಂಬಾ ಸಂತೋಷವಾಗಿದೆ ಎಂದು ರಾಣಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಭವ್ಯಾ ಹೇಳಿದರೆ, ಈ ಚಿತ್ರವನ್ನು ಮುಂದಿನ ವರ್ಷದ ಏಪ್ರಿಲ್​ ಅಥವಾ ಮೇನಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕ ತ್ರಿವಿಕ್ರಮ ಸಫಲ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net