

‘ಯಾವುದೇ ಕಾರಣಕ್ಕೆ ಚಿತ್ರ ನಿಂತಿಲ್ಲ. ಸದ್ಯಕ್ಕೆ ಪೇಪರ್ ವರ್ಕ್ ನಡೆಯುತ್ತಿದೆ. ಇನ್ನೊಂದು ತಿಂಗಳಲ್ಲಿ ಸಿನಿಮಾ ಶುರು ...’ ‘ದುನಿಯಾ’ ಸೂರಿ ಹೀಗೆ ಹೇಳಿದ್ದು ತಮ್ಮ ಹೊಸ ಚಿತ್ರ ‘ಕಾಗೆ ಬಂಗಾರ’ದ ಬಗ್ಗೆ.
‘ಪಾಪ್ಕಾರ್ನ್ ಮಂಕಿ ಟೈಗರ್’ ಚಿತ್ರದ ಕೊನೆಯಲ್ಲಿ ತಮ್ಮ ಮುಂದಿನ ಚಿತ್ರವಾಗಿ ‘ಕಾಗೆ ಬಂಗಾರ’ ಬರಲಿದೆ ಎಂದು ಸೂರಿ ಸುಳಿವು ನೀಡಿದ್ದರು. ಆದರೆ, ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ದಿನೇಶ್ ಗೌಡ ನಿರ್ದೇಶಿಸುತ್ತಿರುವ ‘ಕಾಗೆ ಬಂಗಾರ’ ಚಿತ್ರದ ಪೋಸ್ಟರ್ ಕಾಣಿಸಿಕೊಂಡ ನಂತರ, ಆ ಟೈಟಲ್ ಸೂರಿ ಅವರ ಕೈತಪ್ಪಿತೇ ಅಥವಾ ಆ ಹೆಸರಿನ ಚಿತ್ರವನ್ನು ಸೂರಿ ಕೈಬಿಟ್ಟಿದ್ದಾರೆಯೇ ಎಂಬ ಪ್ರಶ್ನೆಗಳು ಕೇಳಿ ಬಂದವು. ಈ ಹಿನ್ನೆಲೆಯಲ್ಲಿ ಅವರನ್ನು ಮಾತನಾಡಿಸಿದಾಗ, ‘ಈ ಪ್ರಕರಣ ಬಗೆಹರಿದಿದೆ. ‘ಕಾಗೆ ಬಂಗಾರ’ ಹೆಸರಿನ ಸಿನಿಮಾ ನಾನೇ ಮಾಡುತ್ತಿದ್ದೇನೆ ಮತ್ತು ಇನ್ನೊಂದು ತಿಂಗಳಲ್ಲಿ ಚಿತ್ರ ಪ್ರಾರಂಭವಾಗಲಿದೆ’ ಎನ್ನುತ್ತಾರೆ ಸೂರಿ.
ಪ್ರಕರಣ ಬಗೆಹರಿದಿದೆ: ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ‘ಕೆಂಡ ಸಂಪಿಗೆ’, ‘ಕಾಗೆ ಬಂಗಾರ’, ‘ಗಿಣಿಮರಿ ಕೇಸ್’, ‘ಬ್ಲಾಕ್ ಮ್ಯಾಜಿಕ್’ ಹೆಸರುಗಳನ್ನು ರಿಜಿಸ್ಟರ್ ಮಾಡಿಸಿದ್ದೆ. ಆ ಹೆಸರುಗಳು ನನ್ನ ಬ್ಯಾನರ್ನಲ್ಲೇ ಇದೆ. ಬಹುಶಃ ಸೌಂಡಿಂಗ್ ಚೆನ್ನಾಗಿರಬಹುದು ಎಂದು ಯಾರೋ ಅದೇ ಹೆಸರಿನ ಚಿತ್ರ ಮಾಡುವ ಪ್ರಯತ್ನ ಮಾಡಿರ ಬಹುದು. ವಿಷಯ ಗೊತ್ತಾದಾಗ, ಚೇಂಬರ್ಗೆ ದೂರು ಕೊಟ್ಟೆ. ಅವರು ಈ ಪ್ರಕರಣವನ್ನು ಬಗೆಹರಿಸಿದ್ದಾರೆ’ ಎನ್ನುತ್ತಾರೆ ಸೂರಿ.
‘ಕಂಟ್ರಿ ಪಿಸ್ತೂಲ್’ ಕೈತಪ್ಪಿತು: ‘ಈ ಹಿಂದೆ ‘ಕಂಟ್ರಿ ಪಿಸ್ತೂಲ್’ ಎನ್ನುವ ಶೀರ್ಷಿಕೆ ರಿಜಿಸ್ಟರ್ ಮಾಡಿಸಿದ್ದೆ. ಆದರೆ, ಆ ಹೆಸರು ನನ್ನ ಕೈತಪ್ಪಿತ್ತು. ಅದೇ ಹೆಸರಿನ ಚಿತ್ರವನ್ನು ಈಗ ಬೇರೆ ಯಾರೋ ಮಾಡುತ್ತಿದ್ದಾರೆ. ಬಹುಶಃ ಬೇರೆಬೇರೆ ವಾಣಿಜ್ಯ ಮಂಡಳಿ ಶುರು ಆಗಿರುವುದರಿಂದ, ಒಂದೇ ಹೆಸರು ಬೇರೆಬೇರೆ ಕಡೆ ದಾಖಲಾಗಿರುವ ಸಾಧ್ಯತೆ ಇರುತ್ತದೆ. ಒಂದು ಟೈಟಲ್ ಸಿಗದಿದ್ದಾಗ, ಇನ್ನೊಂದು ಶೀರ್ಷಿಕೆ ಇಡಬಹುದಲ್ಲ ಎಂದು ಹೇಳಬಹುದು. ಆದರೆ, ಒಂದು ಕಥೆ ಮಾಡಿಕೊಂಡು, ಅದಕ್ಕೆ ಸೂಕ್ತವಾದ ಹೆಸರಿಟ್ಟಾಗ, ಅದರ ಮೇಲೆ ಒಂದು ವಿಶೇಷವಾದ ಒಲವಿರುತ್ತದೆ. ಬೇರೆಯವರು ಆ ಶೀರ್ಷಿಕೆ ಬಳಸಿಕೊಂಡಾಗ ಸಹಜವಾಗಿಯೇ ಬೇಸರವಾಗುತ್ತದೆ’ ಎನ್ನುತ್ತಾರೆ.
ಇನ್ನು, ‘ಕಾಗೆ ಬಂಗಾರ’ ಕುರಿತು ಮಾತನಾಡುವ ಅವರು, ‘ಈಗಾಗಲೇ ಪೇಪರ್ವರ್ಕ್ ಶುರುವಾಗಿದೆ. ಈ ಚಿತ್ರದಲ್ಲಿ ಬಬ್ಲೂ ಮತ್ತು ಹಾವ್ರಾಣಿ ಮುಂದುವರೆಯಲಿದ್ದಾರೆ. ಹಣಕಾಸಿನ ಸಾಧ್ಯತೆ ನೋಡಿಕೊಂಡು ಚಿತ್ರ ಮಾಡುತ್ತಿದ್ದೇವೆ. ಆದರೆ, ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಕರೋನಾ ಹಾವಳಿ ಸ್ವಲ್ಪ ಕಡಿಮೆಯಾಗುತ್ತಿದ್ದಂತೆ ಚಿತ್ರ ಪ್ರಾರಂಭವಾಗಲಿದೆ’ ಎಂದು ಮಾತು ಮುಗಿಸುತ್ತಾರೆ ಸೂರಿ.