ಚಿರು-ಚೈತನ್ಯ ಹೊಸ ದಾಖಲೆ ಮಾಡಿದ್ದರು!

Chiru - Chaitanya - Final
Published on

ಭಾನುವಾರ ಹೃದಯಾಘಾತದಿಂದ ನಿಧನರಾದ ಸ್ಯಾಂಡಲ್​ವುಡ್​ ನಟ ಚಿರಂಜೀವಿ ಸರ್ಜಾ ಅವರನ್ನು ಕನ್ನಡ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ಚಿರು ಎಂಥಾ ಸ್ನೇಹಜೀವಿಯಾಗಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದಾರೆ. ಅವರ ಜತೆಗೆ ನಾಲ್ಕು ಚಿತ್ರಗಳನ್ನು ಮಾಡಿರುವ ನಿರ್ದೇಶಕ ಚೈತನ್ಯ, ಇದೀಗ ಚಿರು ಸಾವಿನ ಬಗ್ಗೆ ಮಾತನಾಡಿದ್ದಾರೆ.

ಬಹುಶಃ ಇತ್ತೀಚಿನ ವರ್ಷಗಳಲ್ಲಿ ಯಾವ ನಟ ಮತ್ತು ನಿರ್ದೇಶಕ ಸಹ ಅಷ್ಟೊಂದು ಚಿತ್ರಗಳಲ್ಲಿ ಜತೆಯಾಗಿರಲಿಲ್ಲ. ಆದರೆ, ಚಿರಂಜೀವಿ ಸರ್ಜಾ ಅವರ ಜತೆಗೆ ಸತತವಾಗಿ ಕೆಲಸ ಮಾಡಿದ್ದ ಕೆ.ಎಂ. ಚೈತನ್ಯ, ಅವರ ಅಭಿನಯದಲ್ಲಿ ನಾಲ್ಕು ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲೇ ಇದೊಂದು ದಾಖಲೆ ಎಂದರೆ ತಪ್ಪಿಲ್ಲ.

ಚಿರಂಜೀವಿ ಸರ್ಜಾ ಮತ್ತು ಕೆ.ಎಂ. ಚೈತನ್ಯ ಜತೆಯಾಗಿ ಮೊದಲು ಕೆಲಸ ಮಾಡಿದ್ದು ದ್ವಾರಕೀಶ್​ ನಿರ್ಮಾಣದ ಆಟಗಾರ ಚಿತ್ರದಲ್ಲಿ. ಈ ಚಿತ್ರ ಯಶಸ್ವಿಯಾಗುವುದರ ಜತೆಗೆ, ಅವರಿಬ್ಬರ ಸ್ನೇಹ ಗಟ್ಟಿಯಾಯಿತು. ನಂತರದ ವರ್ಷಗಳಲ್ಲಿ ಆಕೆ, ಅಮ್ಮಾ ಐ ಲವ್​ ಯೂ ಮತ್ತು ಆದ್ಯ ಚಿತ್ರಗಳಲ್ಲಿ ಚಿರು ಅವರನ್ನು ಚೈತನ್ಯ ನಿರ್ದೇಶನ ಮಾಡಿದ್ದರು. ಈ ಪೈಕಿ ಆದ್ಯ ಚಿತ್ರವು ಈ ವರ್ಷದ ಫೆಬ್ರವರಿಯಲ್ಲಿ ಬಿಡುಗಡೆಯಾಗಿದ್ದು, ಅದೇ ಅವರಿಬ್ಬರ ಕೊನೆಯ ಚಿತ್ರವಾಯಿತು. ಈ ನಾಲ್ಕೂ ಚಿತ್ರಗಳು ಅ ಅಕ್ಷರದಿಂದ ಶುರುವಾಗಿರುವುದು ವಿಶೇಷ.

ತಮ್ಮ ಮತ್ತು ಚಿರು ಒಡನಾಟವನ್ನು ನೆನಪಸಿಕೊಂಡಿರುವ ಚೈತನ್ಯ, ಚಿರು ಸಾವಿಗೆ ಕಂಬನಿ ಮಿಡಿದಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಅವರು, ಆತ ಇನ್ನಿಲ್ಲ ಎಂದು ನಂಬಲು ಈಗಲೂ ಸಾಧ್ಯವಾಗುತ್ತಿಲ್ಲ. ಜತೆಗೆ ಕಳೆದ ಗಳಿಗೆಗಳು ಸದಾ ನೆನಪಿನಲ್ಲಿ ಉಳಿಯುತ್ತವೆ... ಎಂದು ಅವರು ಬರೆದುಕೊಂಡಿದ್ದಾರೆ.

ಭಾನುವಾರ ಹೃದಯಾಘಾತದಿಂದ ನಿಧನರಾದ ಸ್ಯಾಂಡಲ್​ವುಡ್​ ನಟ ಚಿರಂಜೀವಿ ಸರ್ಜಾ ಅವರ ಅಂತಿಮ ಸಂಸ್ಕಾರ ಇಂದು ಮಧ್ಯಾಹ್ನ, ಕನಕಪುರ ರಸ್ತೆಯಲ್ಲಿರುವ ನೆಲಗುಳಿಯ ಧ್ರುವ ಸರ್ಜಾ ಅವರ ಬೃಂದಾವನ ಫಾರ್ಮ್​ ಹೌಸ್​ನಲ್ಲಿ ನಡೆಯಲಿದೆ. ಅಲ್ಲಿ ಭರದಿಂದ ಕೆಲಸಗಳು ನಡೆಯುತ್ತಿದ್ದು, ಇಂದು ಮಧ್ಯಾಹ್ನ ಚಿರ ಅವರ ಪಾರ್ತೀವ ಶರೀರವನ್ನು ಅಲ್ಲಿಗೆ ಕೊಂಡಯ್ಯಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net