

ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಅವರಿಗಿದ್ದ ಡಿಪ್ರೆಶನ್ ಕಾರಣ ಎಂದು ಹೇಳಲಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಡಿಪ್ರೆಶನ್ನಿಂದ ಬಳಲುತ್ತಿದ್ದ ಸುಶಾಂತ್, ಅದಕ್ಕೆ ಚಿಕಿತ್ಸೆಯೂ ಪಡೆಯುತ್ತಿದ್ದರಂತೆ. ಆದರೆ, ಸುಶಾಂತ್ಗೆ ಡಿಪ್ರೆಶನ್ ಇದ್ದ ವಿಷಯವೇ ಗೊತ್ತಿಲ್ಲ ಎಂದು ಅವರ ತಂದೆ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಸುಶಾಂತ್ ಮುಂಬೈನಲ್ಲಿದ್ದರೂ, ಅವರ ತಂದೆ ಕೆ.ಕೆ. ಸಿಂಗ್ ಹಾಗೂ ಇನ್ನಿತರ ಕುಟುಂಬವರ್ಗದವರು ಪಾಟ್ನಾದಲ್ಲಿ ನೆಲೆಸಿದ್ದರು. ಸುಶಾಂತ್ ಸಾವಿನ ಸುದ್ದಿ ಕೇಳಿ ಝರ್ಜರಿತರಾಗಿದ್ದ ಕೆ.ಕೆ. ಸಿಂಗ್, ಸೋಮವಾರ ಮುಂಬೈಗೆ ಬಂದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಸುಶಾಂತ್ ಸಾವಿನ ಕುರಿತಾಗಿ ಮೌನವಾಗಿದ್ದ ಅವರು, ಇದೀಗ ಮೊದಲ ಬಾರಿಗೆ ಮಾತನಾಡಿದ್ದಾರೆ. ಸುಶಾಂತ್ ಸಾವಿನ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು, ಅವರ ವಿಚಾರಣೆ ನಡೆಸಿದ್ದು, ಈ ಸಂದರ್ಭದಲ್ಲಿ ಸಿಂಗ್ ಅವರು ತಮ್ಮ ಮಗನ ಕುರಿತಾಗಿ ಮಾತನಾಡಿದ್ದಾರೆ.
ಸುಶಾಂತ್ ಯಾವಾಗಲೂ ಡಲ್ ಆಗಿರುತ್ತಿದ್ದ. ಆದರೆ, ಅವನಿಗೆ ಡಿಪ್ರೆಶನ್ ಇರುವ ವಿಷಯ ನನಗೆ ಗೊತ್ತಿರಲಿಲ್ಲ. ಹಾಗೆಯೇ, ಅದಕ್ಕೆ ಅವನು ಚಿಕಿತ್ಸೆ ಪಡೆಯುತ್ತಿರುವ ವಿಷಯ ಸಹ ನನಗೆ ಗೊತ್ತಿಲ್ಲ ಎಂದು ಕೆ.ಕೆ. ಸಿಂಗ್ ಹೇಳಿಕೊಂಡಿದ್ದಾರೆ.
ಮುಂಬೈ ಪೊಲೀಸರು, ಸಿಂಗ್ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಈ ಮಧ್ಯೆ ಸುಶಾಂತ್ ಅವರ ಮ್ಯಾನೇಜರ್ ಆಗಿದ್ದ ಸಿದ್ಧಾರ್ಥ್ ಪಠಾಣಿ ಅವರನ್ನು ವಿಚಾರಣೆ ಮಾಡಿ, ಅವರಿಂದ ಹಲವು ಮಾಹಿತಿಗಳನ್ನು ಪಡೆಯುತ್ತಿರುವುದಾಗಿ ಹೇಳಲಾಗುತ್ತಿದೆ.