

ಮುಂಬೈ: ಮಾರ್ಚ್ 11 ರಂದು ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದ್ದ ಜಾನ್ ಅಬ್ರಹಾಂ ಮತ್ತು ಇಮ್ರಾನ್ ಹಶ್ಮಿ ನಾಯಕತ್ವದ ಮುಂಬೈ ಸಾಗಾ ಸಿನಿಮಾ ಇದೀಗ ಡಿಜಿಟಲ್ ವೇದಿಕೆಗೆ ಎಂಟ್ರಿ ಕೊಟ್ಟಿದೆ. ಕರೊನಾ ಹಿನ್ನೆಲೆಯಲ್ಲಿ ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆ ಆದರೂ, ಗಳಿಕೆಯಲ್ಲಿ ಸಿನಿಮಾ ಸೋಲುಂಡಿತ್ತು. ಇದೀಗ ಅಮೆಜಾನ್ ಪ್ರೈಂನಲ್ಲಿ ಚಿತ್ರ ಸ್ಟ್ರೀಮ್ ಆಗುತ್ತಿದೆ.
ಹೌದು, ಸಂಜಯ್ ಗುಪ್ತಾ ನಿರ್ದೇಶನದಲ್ಲಿ ಸಿದ್ಧವಾಗಿರುವ ಮುಂಬೈ ಸಾಗಾ ಚಿತ್ರ ಕೆಲ ವರ್ಷಗಳ ಹಿಂದೆಯೇ ಶೂಟಿಂಗ್ ಮುಗಿಸಿಕೊಂಡಿದ್ದರೂ, ಬಿಡುಗಡೆ ಆಗಿರಲಿಲ್ಲ. ಕಳೆದ ವರ್ಷ ತೆರೆಗೆ ಬರಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದರೂ ಕರೊನಾದಿಂದಾಗಿ ಸಾಧ್ಯವಾಗಿರಲಿಲ್ಲ. ಇದೀಗ ಥೇಟರಿಕಲ್ ಬಿಡುಗಡೆ ಬಳಿಕ ಓಟಿಟಿಗೆ ಆಗಮಿಸಿದೆ.
ಟಿ ಸಿರೀಸ್ ನಿರ್ಮಾಣ ಸಂಸ್ಥೆ ವತಿಯಿಂದ ಭೂಷಣ್ ಕುಮಾರ್, ಕೃಷಣ್ ಕುಮಾರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಜಾನ್ ಅಬ್ರಹಾಂಗೆ ಜೋಡಿಯಾಗಿ ಕಾಜಲ್ ಅಗರ್ವಾಲ್ ನಟಿಸಿದ್ದು, 80 ಮತ್ತು 90ರ ಕಾಲಘಟ್ಟದ ಮುಂಬೈ ಪಟ್ಟಣದ ಕಥೆಯನ್ನು ಈ ಸಿನಿಮಾ ತೆರೆದಿಡಲಿದೆ.