ನಾನು, ಗುಂಡ ಮತ್ತು ಪ್ರೇಮ್​; ಪ್ಯಾನ್​ ಇಂಡಿಯಾ ಬಿಡುಗಡೆ ಆಗಲಿದೆ "ನಾನು ಮತ್ತು ಗುಂಡ 2'

scz
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ಶಿವರಾಜ್​ ಕೆಆರ್​ ಪೇಟೆ ಮತ್ತು ಸಂಯುಕ್ತಾ ಹೊರನಾಡು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಸಿನಿಮಾ "ನಾನು ಮತ್ತು ಗುಂಡ' 2020ರಲ್ಲಿ ಬಿಡುಗಡೆಯಾಗಿತ್ತು. ಇದೀಗ ಅದರ ಮುಂದುವರಿದ ಭಾಗವನ್ನು ರಘು ಹಾಸನ್​ ನಿರ್ದೇಶಿಸಿದ್ದು ರಾಕೇಶ್​ ಅಡಿಗ ಮತ್ತು ರಚನಾ ಇಂದರ್​ ನಟಿಸಿದ್ದಾರೆ. ಕೆಲ ದಿನಗಳ ಹಿಂದೆ ಚಿತ್ರದ ಟ್ರೇಲರ್​ ಬಿಡುಗಡೆ ಮಾಡಲಾಗಿದ್ದು, ಇತ್ತೀಚೆಗಷ್ಟೆ ನಿರ್ದೇಶಕ ಜೋಗಿ ಪ್ರೇಮ್​ ಟೈಟಲ್​ ಸಾಂಗ್​ ರಿಲೀಸ್​ ಮಾಡಿದರು.

"ರಘು ನನ್ನ ಜತೆ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಆತ ಒಳ್ಳೆ ತಂತ್ರಜ್ಞ. ನಾವೇನೇ ಕಷ್ಟಪಟ್ಟು ಸಿನಿಮಾ ಮಾಡಿದರೂ, ಒಂದು ನಾಯಿಯನ್ನು ಪಳಗಿಸಿ ಆ್ಯಕ್ಟ್​ ಮಾಡಿಸುವುದು ಸುಲಭವಲ್ಲ' ಎಂದು ಚಿತ್ರತಂಡಕ್ಕೆ ಶುಭಹಾರೈಸಿದರು ಪ್ರೇಮ್​. ಚಿತ್ರದಲ್ಲಿ ಆರು ಹಾಡುಗಳಿಗೆ ಸಂಗೀತ ನೀಡಿರುವ ಆರ್​.ಪಿ. ಪಟ್ನಾಯಕ್​, "ಒಂದು ನಾಯಿ ಮತ್ತು ಬಾಲಕನೊಬ್ಬನ ಬಾಂಧವ್ಯದ ಅದ್ಭುತವಾದ ಕಥೆಯಿದು. ನಾನು ಮೊದಲ ಭಾಗ ನೋಡಿದ್ದೆ. ಕಥೆಯ ಜತೆಗೆ ಅದರಲ್ಲಿದ್ದ ಎಮೋಷನ್ಸ್​ ಕೂಡ ಈ ಸೀಕ್ವೆಲ್​ನಲ್ಲಿ ಮುಂದುವರಿದಿದೆ' ಎಂದರು.

ನಿರ್ದೇಶಕ ರಘು ಹಾಸನ್​, "ಈಗಾಗಲೇ ಚಿತ್ರದ ಮೊದಲ ಪ್ರತಿ ರೆಡಿಯಾಗಿದ್ದು, ಸದ್ಯದಲ್ಲೇ ಸೆನ್ಸಾರ್​ಗೆ ಹೋಗಲಿದೆ. ಕೆಲವೇ ದಿನಗಳಲ್ಲಿ ಚಿತ್ರದ ಮತ್ತೊಂದು ಹಾಡು ಹಾಗೂ ಟ್ರೇಲರ್​ ಬಿಡುಗಡೆ ಮಾಡಲಿದ್ದೇವೆ. ಸಾಮಾಜಿಕ ಕಳಕಳಿಯ ಜತೆಗೆ ದೈವಿಕ ಅಂಶಗಳೂ ಚಿತ್ರದಲ್ಲಿದೆ. ಊಟಿ, ಶಿವಮೊಗ್ಗ, ತೀರ್ಥಹಳ್ಳೀ, ಬಾಳೆಹೊನ್ನೂರು ಸುತ್ತಮುತ್ತ ಚಿತ್ರೀಕರಣ ಮಾಡಿದ್ದೇವೆ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಹೀಗೆ ಐದು ಭಾಷೆಗಳಲ್ಲಿ ಪ್ಯಾನ್​ ಇಂಡಿಯಾ ಸಿನಿಮಾ ಬಿಡುಗಡೆಯಾಗಲಿದೆ' ಎಂದು ಮಾಹಿತಿ ನೀಡುತ್ತಾರೆ. ರಾಕೇಶ್​, ರಚನಾ ಜತೆ ಸಿಂಬು ಮತ್ತು ಬಂಟಿ ಎಂಬ ಎರಡು ಶ್ವಾನಗಳು ನಟಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net