

ಬೆಂಗಳೂರು: ಸ್ಟಾರ್ ಸುವರ್ಣ ವಾಹಿನಿಯ ಧಾರಾವಾಹಿ ಬಳಗಕ್ಕೀಗ ಹೊಸ ಸೀರಿಯಲ್ವೊಂದು ಸೇರ್ಪಡೆಯಾಗುತ್ತಿದೆ. ಅದೇ ‘ಜೇನುಗೂಡು’. ಸ್ಟಾರ್ ನೆಟ್ವರ್ಕ್ನ ಅತ್ಯಂತ ಯಶಸ್ವಿ ಧಾರಾವಾಹಿಯಲ್ಲಿ ಒಂದಾದ ಬೆಂಗಾಲಿಯ ‘ಚೋರ್ಕಟೋ’ ಧಾರಾವಾಹಿಯೇ ಇದೀಗ ಕನ್ನಡದಲ್ಲಿಯೂ ಇಂದಿನಿಂದ ಪ್ರಸಾರ ಆರಂಭಿಸಲಿದೆ. ಈಗಾಗಲೇ ಮಲಯಾಳಂ, ಹಿಂದಿ, ಮರಾಠಿ, ತಮಿಳಿನಲ್ಲಿ ಆಯಾ ಪ್ರಾದೇಶಿಕ ಭಾಷೆಯಲ್ಲಿ ಬೇರೆ ಬೇರೆ ಹೆಸರುಗಳಿಂದ ಈ ಧಾರಾವಾಹಿ ಮೋಡಿ ಮಾಡಿದೆ. ಇದೀಗ ಕನ್ನಡದಲ್ಲಿ ಮತ್ತಷ್ಟು ಕಲರ್ಫುಲ್ ಆಗಿ ಇಂದಿನಿಂದ ರಾತ್ರಿ 10ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಈ ಧಾರಾವಾಹಿಯ ಹೀರೋ ಶಶಾಂಕನಿಗೆ ಅಮೆರಿಕದಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿರೂ ಕುಟುಂಬದ ಸಲುವಾಗಿ ಅದನ್ನು ತ್ಯಜಿಸುತ್ತಾನೆ. ಇದಕ್ಕೆ ವ್ಯತಿರಿಕ್ತವಾಗಿ ನಾಯಕಿ ದಿಯಾ ಖ್ಯಾತ ಸರ್ಜನ್. ಕುಟುಂಬದ ಬಂಧಗಳ ಬಗ್ಗೆ ಅರಿವೇ ಇರುವುದಿಲ್ಲ. ಹೀಗೆ ಸಾಗುವ ಕಥೆ ಹಲವು ಏರಿಳಿತ ಕಾಣುತ್ತದೆ. ನಾಯಕ ಮತ್ತು ನಾಯಕಿಯನ್ನು ಒಂದು ಮಾಡಲು ಎರಡೂ ಕುಟುಂಬಗಳು ಹೇಗೆ ಹರಸಾಹಸ ಪಡುತ್ತವೆ? ಮುನಿಸು, ಪ್ರೀತಿ, ಸ್ನೇಹ ಇವೆಲ್ಲವುಗಳ ಮಿಶ್ರಣವೂ ಜೇನುಗೂಡಿನಲ್ಲಿರಲಿದೆ.
ರೇಖಾ ಕೆ.ಪಿ ಈ ಧಾರಾವಾಹಿಯನ್ನು ನಿರ್ವಿುಸುತ್ತಿದ್ದಾರೆ. ಆರವ್ ಮತ್ತು ನಿತ್ಯಾ ನಾಯಕ ನಾಯಕಿಯಾಗಿದ್ದಾರೆ. ವೀಣಾ ಸುಂದರ್, ರಮೇಶ್ ಪಂಡಿತ್, ರವಿ ಭಟ್, ಶ್ರೀಕಾಂತ್ ಹೆಬ್ಳೀಕರ್ ಸೇರಿ ಉತ್ತರ ಕರ್ನಾಟಕದ ಹಲವು ಕಲಾವಿದರು ಈ ಧಾರಾವಾಹಿಯಲ್ಲಿದ್ದಾರೆ. ಸೀರಿಯಲ್ನಲ್ಲಿ ಉತ್ತರ ಕರ್ನಾಟಕ ಭಾಗದ ಸಂಸ್ಕೃತಿ , ಶೈಲಿ ಹಾಗೂ ಅಲ್ಲಿನ ಭಾಷೆಯನ್ನು ಒಳಗೊಂಡಿರಲಿದೆ.