

ಕಳೆದ ಹಲವು ದಿನಗಳಿಂದ ಖಿನ್ನತೆಯಿಂದ ಬಳಲುತ್ತಿರುವ ಸ್ಯಾಂಡಲ್ವುಡ್ ನಟಿ ಜಯಶ್ರೀ ರಾಮಯ್ಯ ಅವರು ಮಂಗಳವಾರ, ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಕೇಶ ಮುಂಡನ ಮಾಡಿಸಿಕೊಂಡಿರುವ ಅವರು, ಹೊಸ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿದ್ದಾರೆ.
ಈ ಕುರಿತು ಮಂಗಳವಾರ, ಸೋಷಿಯಲ್ ಮೀಡಿಯಾದಲ್ಲಿ ಜಯಶ್ರೀ ಒಂದು ಪೋಸ್ಟ್ ಹಾಕಿದ್ದಾರೆ. ಇದರಲ್ಲಿ ತಲೆ ಬೋಸಿಕೊಂಡಿರುವ ಫೋಟೋ ಪೋಸ್ಟ್ ಮಾಡಿರುವ ಅವರು, ಅದಕ್ಕೆ ‘ಒಳ್ಳೆಯ ನಾಳಿನ ಕಡೆಗೆ ಮೊದಲ ಹೆಜ್ಜೆ ...’ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.
ಕೆಲವು ದಿನಗಳ ಹಿಂದೆ ಜಯಶ್ರೀ ರಾವಯ್ಯ ತೀವ್ರ ಮಾನಸಿಕ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಈ ಖಿನ್ನತೆ ತಡೆದುಕೊಳ್ಳಲಾಗುತ್ತಿಲ್ಲ, ಜೀವನ ಸಾಕಾಗಿದೆ ಎಂದು ಹೇಳಿಕೊಂಡಿದ್ದರು. ಇದರಿಂದ ಅವರ ಆಪ್ತರು ಸಾಕಷ್ಟು ಆತಂಕಗೊಂಡಿದ್ದರು.
ಆ ನಂತರ ಇನ್ನೊಂದು ವಿಡಿಯೋದಲ್ಲಿ ಮಾತನಾಡಿದ್ದ ಅವರು, ‘ನನಗೆ ಧನಸಹಾಯದ ಅವಶ್ಯಕತೆ ಇಲ್ಲ. ನಾನು ಯಾರ ಬಳಿಯೂ ಧನಸಹಾಯ ಕೇಳಿಲ್ಲ. ನನಗೀಗ ಬೇಕಿರುವುದು ಸಾವು. ತುಂಬಾ ಖಿನ್ನತೆಗೊಳಗಾಗಿದ್ದೇನೆ. ನನ್ನಿಂದ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನಗೆ ದಯಾಮರಣ ಕೊಡಿ’ ಎಂದು ಕೇಳಿದ್ದರು.
ಈ ವಿಷಯವಾಗಿ, ನಟ ಸುದೀಪ್ ಸೇರಿದಂತೆ ಹಲವರು ಅವರಿಗೆ ಧೈರ್ಯ ತುಂಬಿದ್ದರು. ಹೊಸ ಭರವಸೆಗಳೊಂದಿಗೆ ಬದುಕು ಪ್ರಾರಂಭಿಸಲು ಸಲಹೆ ನೀಡಿದ್ದರು. ಎಲ್ಲರ ಧೈರ್ಯದ ಮಾತುಗಳನ್ನು ಆಲಿಸಿದ ಜಯಶ್ರೀ, ಆತ್ಮಹತ್ಯೆ ಪ್ರಯತ್ನ ಕೈಬಿಟ್ಟು, ಹೊಸ ಜೀವನ ನಡೆಸುವುದಾಗಿ ಹೇಳಿಕೊಂಡಿದ್ದರು.
ಅದರಂತೆ, ಜಯಶ್ರೀ ಈಗ ಹೊಸ ಹೆಜ್ಜೆ ಇಟ್ಟಿದ್ದಾರೆ. ಮೊದಲ ಹಂತವಾಗಿ ತಲೆ ಬೋಳಿಸಿಕೊಂಡಿರುವ ಅವರು, ಆ ಫೋಟೋ ಹಂಚಿಕೊಂಡಿದ್ದಾರೆ.