

ಮುಂಬೈ: ಸ್ಯಾಂಡಲ್ವುಡ್ನಿಂದ ಸಿನಿ ಪಯಣವನ್ನು ಆರಂಭಿಸಿದ ನಟಿ ರಶ್ಮಿಕಾ ಮಂದಣ್ಣ, ನಂತರ ಟಾಲಿವುಡ್, ಬಾಲಿವುಡ್ನ ಸಿನಿಮಾಗಳಲ್ಲಿ ಕಾಣಿಸಿಕೊಂಡು, ನ್ಯಾಷನಲ್ ಕ್ರಶ್ ಎಂಬ ಬಿರುದನ್ನು ಧರಿಸಿಕೊಂಡಳು.
ಆದರೆ, ಈ ರಶ್ಮಿಕಾ ಮಂದಣ್ಣ ಆಗಾಗ್ಗೆ ಒಂದಿಲ್ಲೊಂದು ವಿಚಾರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌ಗಳ ಕೆಂಗಣ್ಣಿಗೆ ಗುರಿಯಾಗುತ್ತಿರುತ್ತಾರೆ. ಅದರಲ್ಲೂ ಹಿಂದಿ ಸಿನಿಮಾಗಳಲ್ಲಿ ಅವರ ಸಂಭಾಷಣೆ ಮತ್ತು ಉಚ್ಚಾರಣೆಯ ಶೈಲಿ ನೋಡಿ ನೆಟ್ಟಿಗರು ವ್ಯಂಗ್ಯ ಮಾಡುವುದು ಮಾಮೂಲಿಯಾಗಿದೆ.
ಆದರೆ ಇದೀಗ ರಶ್ಮಿಕಾ ಪರವಾಗಿ ನಿಲ್ಲಲು ಹೋಗಿ ಹಿರಿಯ ಗೀತರಚನೆಕಾರ ಜಾವೇದ್ ಅಖ್ತರ್, ಸೋಷಿಯಲ್ ಮೀಡಿಯಾದಲ್ಲಿ ಮಾಡಿದ ಒಂದು ಎಡವಟ್ಟಿನಿಂದಾಗಿ ಕ್ಷಮೆಯಾಚಿಸುವ ಸ್ಥಿತಿ ತಲುಪಿದ್ದಾರೆ.
ರಶ್ಮಿಕಾ ಮಂದಣ್ಣ ಹಿಂದಿ ಮಾತನಾಡುವ ರೀತಿಯನ್ನು ನೋಡಿ ಅಣಕಿಸುತ್ತಿದ್ದ ಟ್ರೋಲರ್‌ಗಳಿಗೆ ಜಾವೇದ್ ಅಖ್ತರ್ ಖಡಕ್ ತಿರುಗೇಟು ನೀಡಿದ್ದರು. ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದ ಅವರು, "ತಮ್ಮ ಮಾತೃಭಾಷೆ ಅಲ್ಲದ ಇನ್ನೊಂದು ಭಾಷೆಯಲ್ಲಿ ಮಾತನಾಡುವವರ ಉಚ್ಚಾರಣೆಯನ್ನು ನೋಡಿ ಗೇಲಿ ಮಾಡುವುದು ಶುದ್ಧ ಅಹಂಕಾರ. ರಶ್ಮಿಕಾ ಅವರ ಹಿಂದಿ ಉಚ್ಚಾರಣೆಯ ಬಗ್ಗೆ ಸಮಸ್ಯೆ ಇರುವವರಿಗೆ ವಿಶ್ವದ ಅತ್ಯಂತ ಹಳೆಯ ಭಾಷೆಯಾದ ತಮಿಳಿನ ಕೆಲ ಸಾಲುಗಳನ್ನು ಓದಲು ಕೊಡಿ; ಆಗ ಅವರು ಎಷ್ಟು ಚೆನ್ನಾಗಿ ಉಚ್ಚರಿಸುತ್ತಾರೆ ನೋಡೋಣ! ಇಂತಹ ನಕಲಿ ಭಾಷಾ ಶ್ರೇಷ್ಠತೆಯ ಅಹಂಕಾರವನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ" ಎಂದು ಟಾಂಗ್ ಕೊಟ್ಟಿದ್ದರು.
ರಶ್ಮಿಕಾ ಪರ ಧ್ವನಿ ಎತ್ತಿದ ಅಖ್ತರ್ ಅವರ ಉದ್ದೇಶ ಒಳ್ಳೆಯದೇ ಆಗಿದ್ದರೂ, ಅವರು ರಶ್ಮಿಕಾ ಮಂದಣ್ಣ "ತಮಿಳು ನಟಿ" ಎಂದು ಕರೆದಿದ್ದು ಕನ್ನಡಿಗರನ್ನು ಕೆರಳಿಸಿದೆ. ರಶ್ಮಿಕಾ ಕರ್ನಾಟಕದ ಕೊಡಗಿನ ಮೂಲದವಳು, ಈ ಉತ್ತರ ಭಾರತದವರಿಗೆ, ದಕ್ಷಿಣ ಭಾರತದ ಎಲ್ಲಾ ರಾಜ್ಯದವರು 'ಮದ್ರಾಸಿ' ಗಳಂತೆ ಕಾಣಿಸುತ್ತಾರೆ ಎಂದು ಜಾವೇದ್ ಅಖ್ತರ್‌ಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
"ಸರ್, ರಶ್ಮಿಕಾ ಕೊಡಗಿನವರು, ಕೊಡಗು ಕರ್ನಾಟಕದಲ್ಲಿದೆ. ಅವರ ಗಂಡನ ಮನೆ ತೆಲಂಗಾಣ, ಅವರು ತೆಲುಗನ್ನು ಮಾತನಾಡುತ್ತಾರೆ. ನೀವು ಅವರಿಗೆ ಬೆಂಬಲ ನೀಡಿದ್ದನ್ನು ಸ್ವಾಗತಿಸುತ್ತೇವೆ, ಆದರೆ ದಕ್ಷಿಣ ಭಾರತದವರೆಲ್ಲರೂ ಮದ್ರಾಸಿಗಳು ಅಥವಾ ತಮಿಳುನಾಡಿನವರು ಅಂದುಕೊಳ್ಳುವುದು ನಿಮ್ಮ ಅಜ್ಞಾನ" ಎಂದು ಹಲವು ಬಳಕೆದಾರರು ಕಮೆಂಟ್ ಬಾಕ್ಸ್‌ನಲ್ಲಿ ಜಾಡಿಸಿದ್ದಾರೆ.
ತಮ್ಮ ತಪ್ಪಿನ ಅರಿವಾಗುತ್ತಿದ್ದಂತೆ ಜಾವೇದ್ ಅಖ್ತರ್ ತಡಮಾಡದೆ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. "ನನ್ನ ತಪ್ಪಿಗೆ ಕ್ಷಮೆ ಇರಲಿ. ನನಗೆ ಅವರ ಬಗ್ಗೆ ವೈಯಕ್ತಿಕವಾಗಿ ಹೆಚ್ಚಿನ ಮಾಹಿತಿಯಿಲ್ಲ. ಆಕಸ್ಮಿಕವಾಗಿ ನಾನು ನೋಡಿದ ಅವರ ಏಕೈಕ ಚಿತ್ರ ತಮಿಳಿನದ್ದಾಗಿತ್ತು. ಆದರೆ ಇಲ್ಲಿ ತಮಿಳು, ತೆಲುಗು, ಕನ್ನಡ ಅಥವಾ ಮಲಯಾಳಂ ಅನ್ನೋದು ಮುಖ್ಯವಲ್ಲ.
ಯಾರಾದರೂ ನಮ್ಮ ಭಾಷೆಯನ್ನು ಅವರದೇ ಆದ ಶೈಲಿಯಲ್ಲಿ ಮಾತನಾಡಲು ಪ್ರಯತ್ನಿಸಿದಾಗ ನಾವು ಅದನ್ನು ಪ್ರೋತ್ಸಾಹಿಸಬೇಕು. ನಮ್ಮಲ್ಲಿ ಎಷ್ಟು ಜನ ಇಂಗ್ಲಿಷ್ ಅನ್ನು ಪರ್ಫೆಕ್ಟ್ ಆಗಿ ಮಾತನಾಡುತ್ತೇವೆ? ಒಬ್ಬ ಇಂಗ್ಲಿಷಿಗ ಬಂದು ನಮ್ಮ ಉಚ್ಚಾರಣೆಯನ್ನು ನೋಡಿ ನಕ್ಕರೆ ನಮಗೆ ಹೇಗನಿಸುತ್ತದೆ? ನಾನು ಮಾಡಿದ್ದು ತಪ್ಪು, ಈಗ ಅದನ್ನು ಸರಿಪಡಿಸಿಕೊಂಡಿದ್ದೇನೆ" ಎಂದು ಸ್ಪಷ್ಟನೆ ನೀಡಿದ್ದಾರೆ, (ಏಜೆನ್ಸೀಸ್).