

ಜನತಾ ಕರ್ಫ್ಯೂವಿನ ಒಂದು ಭಾಗವಾಗಿ ಪ್ರಜೆಗಳು ತಂತಮ್ಮ ಮನೆಯಲ್ಲೇ ಚಪ್ಪಾಳೆ ತಟ್ಟಿ ಕರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ ಮತ್ತಿತರಿಗೆ ಧನ್ಯವಾದ ಸಲ್ಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಕರೆ ನೀಡಿದ್ದರು. ಅದರಂತೆ ಶುಕ್ರವಾರ ಸ್ಯಾಂಡಲ್‌ವುಡ್ ಕೂಡ ಸ್ಪಂದಿಸಿತ್ತು. ಆ ಪೈಕಿ ‘ಕಿಚ್ಚ’ ಸುದೀಪ್ ಕೂಡ ಬೆಂಬಲ ವ್ಯಕ್ತಪಡಿಸಿ ಚಪ್ಪಾಳೆ ತಟ್ಟಿದ್ದರು. ಅದಕ್ಕೂ ಮುನ್ನ ಅವರು ಆ ಕುರಿತ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದು ಚರ್ಚೆಗೀಡಾಗಿದೆ.
‘ಈ ಚಪ್ಪಾಳೆಯಿಂದ ಮೋದಿ ಅವರು ನಿಮ್ಮ ಮೂಲಕ ಎನರ್ಜಿ ಮೆಡಿಸಿನ್ ಉಂಟಾಗುವಂತೆ ಮಾಡುತ್ತಿದ್ದಾರೆ’ ಎಂಬುದಾಗಿ ಮಹಿಳೆಯೊಬ್ಬರು ಹೇಳಿಕೊಂಡಿದ್ದರು. ಆದರೆ ಇಂಥ ಅವೈಜ್ಞಾನಿಕ ವಿಷಯವನ್ನು ನೀವು ಹಂಚಿಕೊಳ್ಳಬಾರದಿತ್ತು ಎಂದು ಹಲವರು ಸುದೀಪ್‌ಗೆ ರಿಪ್ಲೈ ಮಾಡಿದ್ದರು. ಮಾತ್ರವಲ್ಲ, ನಟ ಚೇತನ್ ಕೂಡ ಸುದೀಪ್ ಟ್ವೀಟ್‌ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.
‘ಚಿತ್ರರಂಗದಲ್ಲಿನ ನಿಮ್ಮ ಸಾಧನೆ ಬಗ್ಗೆ ಗೌರವವಿದೆ. ಹಾಗೆಯೇ ಇಬ್ಬರು ವೈದ್ಯರ ಪುತ್ರನಾಗಿರುವ ನಾನು ವೈದ್ಯಕೀಯ ಸಿಬ್ಬಂದಿ ಬಗ್ಗೆ ಧನ್ಯವಾದ ತಿಳಿಸುವುದನ್ನೂ ಒಪ್ಪುತ್ತೇನೆ. ಆದರೆ ಎನರ್ಜಿ ಮೆಡಿಸಿನ್ ಎಂಬಂಥ ಅವೈಜ್ಞಾನಿಕ ವಿಷಯಗಳನ್ನು ಹರಡಬೇಡಿ’ ಎಂಬುದಾಗಿ ಸುದೀಪ್‌ಗೆ ಚೇತನ್ ಸೋಷಿಯಲ್ ಮೀಡಿಯಾ ಮೂಲಕ ಕೋರಿಕೊಂಡಿದ್ದಾರೆ. ಇದನ್ನು ಖಂಡಿಸಿ ಸುದೀಪ್ ಅಭಿಮಾನಿಗಳು ಚೇತನ್‌ಗೆ ಕಟುವಾಗಿ ಕಮೆಂಟ್ ಮಾಡಿದ್ದೂ ನಡೆದಿದೆ.