ಕೊನೆಗೂ ನಿಜವಾಯ್ತು ಸುದ್ದಿ; 'ಎನ್​ಟಿಆರ್​ 30' ಚಿತ್ರದಲ್ಲಿ ಜಾಹ್ನವಿ ಕಪೂರ್​

Janhvi Kapoor - NTR 30
Published on

ಹೈದರಾಬಾದ್​: ಬಾಲಿವುಡ್​ ನಟಿ ಮತ್ತು ಶ್ರೀದೇವಿ ಅವರ ಮಗಳು ಜಾಹ್ನವಿ ಕಪೂರ್​ ಇಂದು ತಮ್ಮ 26ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಜಾಹ್ನವಿಗೆ ಹುಟ್ಟುಹಬ್ಬದ ಶುಭಾಶಯಗಳು ಹರಿದು ಬರುತ್ತಿದ್ದು, ಅದರಲ್ಲೊಂದು ಶುಭಾಶಯ ಎಲ್ಲರ ಗಮನ ಸೆಳೆಯುತ್ತಿದೆ. ವಿಶೇಷವೆಂದರೆ, ಇದು ಬರೀ ಶುಭಾಶಯವಲ್ಲ, ಜಾಹ್ನವಿ ಅಭಿನಯದ ಹೊಸ ಚಿತ್ರದ ಘೋಷಣೆಯೂ ಹೌದು.

ಜಾಹ್ನವಿ ತಾಯಿ ಶ್ರೀದೇವಿ ಒಂದು ಕಾಲಕ್ಕೆ ತೆಲುಗು ಚಿತ್ರರಂಗದಲ್ಲಿ ದೊಡ್ಡ ನಟಿಯಾಗಿ ಮೆರೆದವರು. ಹಲವು ಜನಪ್ರಿಯ ಹೀರೋಗಳ ಜತೆಗೆ ತೆರೆ ಹಂಚಿಕೊಂಡವರು. ಅವರ ಮಗಳು ಜಾಹ್ನವಿ ಸಹ ತೆಲುಗು ಚಿತ್ರರಂಗದಲ್ಲಿ ನಟಿಸಲಿ ಎಂಬುದು ಶ್ರೀದೇವಿ ಅಭಿಮಾನಿಗಳ ಆಸೆಯಾಗಿತ್ತು. ಅದೀಗ ನಿಜವಾಗಿದೆ. ಜ್ಯೂನಿಯರ್​ ಎನ್​.ಟಿ.ಆರ್ ಅಭಿನಯದ ಹೊಸ ಚಿತ್ರದಲ್ಲಿ ಜಾಹ್ನವಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

ಜ್ಯೂನಿಯರ್​ ಎನ್​ಟಿಆರ್​ ನಾಯಕನಾಗಿ ಅಭಿನಯಿಸುತ್ತಿರುವ 30ನೇ ಚಿತ್ರದಲ್ಲಿ ಜಾಹ್ನವಿ ನಾಯಕಿಯಾಗಿ ಕಾಣಿಸಿಕೊಳ್ಳಬಹುದು ಎಂಬ ಸುದ್ದಿ ಕೆಲವು ತಿಂಗಳುಗಳಿಂದ ಕೇಳಿ ಬರುತ್ತಲೇ ಇತ್ತು. ಆದರೆ, ಜಾಹ್ನವಿ ಆಗಲೀ, ಚಿತ್ರತಂಡದವರಾಗಲೀ ಈ ವಿಷಯವನ್ನು ಖಚಿತಪಡಿಸಿರಲಿಲ್ಲ. ಈಗ ಜಾಹ್ನವಿ ಹುಟ್ಟುಹಬ್ಬದ ಅಂಗವಾಗಿ ಚಿತ್ರತಂಡದವರು ಶುಭ ಕೋರಿರುವುದಷ್ಟೇ ಅಲ್ಲ, ಅವರನ್ನು ಚಿತ್ರತಂಡಕ್ಕೆ ಬರಮಾಡಿಕೊಂಡಿದ್ದಾರೆ.

ಈ ಹೆಸರಿಡದ ಚಿತ್ರವನ್ನು ಕೊರಟಾಲ ಶಿವ ನಿರ್ಮಾಣ ಮಾಡುತ್ತಿದ್ದು, ನಂದಮೂರಿ ತಾರಕ ರಾಮರಾವ್​ ಆರ್ಟ್ಸ್​ನಡಿ ನಿರ್ಮಾಣ ಮಾಡಲಾಗುತ್ತಿದೆ. ಚಿತ್ರಕ್ಕೆ ರತ್ನವೇಲು ಛಾಯಾಗ್ರಹಣ ಮತ್ತು ಅನಿರುದ್ಧ್​ ರವಿಚಂದರ್​ ಸಂಗೀತವಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net