ರೀಮೇಕ್​ ಆಗ್ತಿದೆಯಂತೆ 'ತೇಜಾಬ್​' … ಅನಿಲ್​-ಮಾಧುರಿ ಪಾತ್ರಗಳಲ್ಲಿ ರಣವೀರ್​, ಜಾಹ್ನವಿ?

Ranveer Singh - Jahnavi Kapoor
Published on

ಮುಂಬೈ: ಬಾಲಿವುಡ್​ನಲ್ಲಿ ಹಳೆಯ ಹಿಟ್​ ಚಿತ್ರಗಳ ರೀಮೇಕ್​ ಪರ್ವ ಮುಂದುವರೆದಿದೆ. ಇತ್ತೀಚೆಗಷ್ಟೇ, 'ಅಂಗೂರ್​' ಚಿತ್ರದ ರೀಮೇಕ್​ ಆಗಿದ್ದ 'ಸರ್ಕಸ್​' ಬಿಡುಗಡೆಯಾಗಿ ಹೇಳಹೆಸರಿಲ್ಲದಂತೆ ಮಾಯವಾಗಿದೆ. 'ರಾಮ್​ ಲಖನ್​' ಚಿತ್ರದ ರೀಮೇಕ್​ ಚರ್ಚೆ ನಡೆಯುತ್ತಲೇ ಇದೆ. ಇದರ ಮಧ್ಯೆ, ಬಾಲಿವುಡ್​ನ ಸೂಪರ್​ ಹಿಟ್​ ಚಿತ್ರಗಳ ಪೈಕಿ ಒಂದಾದ 'ತೇಜಾಬ್​' ಸಹ ಈಗ ರೀಮೇಕ್​ ಆಗುತ್ತಿದೆ ಎಂಬ ಸುದ್ದಿ ಜೋರಾಗಿ ಕೇಳಿಬರುತ್ತಿದೆ.

2021ರಲ್ಲೇ 'ತೇಜಾಬ್​' ರೀಮೇಕ್​ ಆಗಬಹುದು ಎಂಬ ಸುದ್ದಿ ಇತ್ತು. ಸಿನಿ 1 ಸ್ಟುಡಿಯೋಸ್​ನ ಮುರಾದ್​ ಖೇತಾನಿ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಕಾರ್ತಿಕ್​ ಆರ್ಯನ್​ ಮತ್ತು ಶ್ರದ್ಧಾ ಕಪೂರ್​ ನಟಿಸಬಹುದು ಎಂದು ಹೇಳಲಾಗಿತ್ತು. ಈಗ ಈ ಜಾಗಕ್ಕೆ ರಣವೀರ್​ ಸಿಂಗ್​ ಮತ್ತು ಜಾಹ್ನವಿ ಕಪೂರ್​ ಬರಬಹುದು ಎಂದು ಹೇಳಲಾಗುತ್ತಿದೆ.

80ರ ದಶಕದಲ್ಲಿ ಬಿಡುಗಡೆಯಾದ 'ತೇಜಾಬ್​' ಚಿತ್ರದಲ್ಲಿ ಅನಿಲ್​ ಕಪೂರ್​, ಮಾಧುರಿ ದೀಕ್ಷಿತ್​, ಚಂಕಿ ಪಾಂಡೆ, ಅನುಪಮ್​ ಖೇರ್​ ಮುಂತಾದವರು ನಟಿಸಿದ್ದರು. ಈ ಚಿತ್ರದ 'ಏಕ್​ ದೋ ತೀನ್​' ಹಾಡು ಸೂಪರ್​ ಹಿಟ್​ ಆಗುವ ಮೂಲಕ ಮಾಧುರಿ ದೀಕ್ಷಿತ್​ಗೆ ಸ್ಟಾರ್​ ಸ್ಟೇಟಸ್​ ತಂದುಕೊಟ್ಟಿತ್ತು. ಆ ನಂತರ 'ಏಕ್​ ದೋ ತೀನ್​ ಗರ್ಲ್​' ಎಂದೇ ಜನಪ್ರಿಯವಾದ ಮಾಧುರಿ ದೀಕ್ಷಿತ್​, ಮತ್ತೆಂದೂ ಹಿಂದಿರುಗಿ ನೋಡಲಿಲ್ಲ.

ಈಗ ಈ ಸೂಪರ್​ ಹಿಟ್​ ಚಿತ್ರ ಮತ್ತೊಮ್ಮೆ ರೀಮೇಕ್​ ಆಗುತ್ತಿದ್ದು, ಅನಿಲ್​ ಕಪೂರ್​ ಮತ್ತು ಮಾಧುರಿ ದೀಕ್ಷಿತ್​ ಅವರ ಪಾತ್ರಗಳಿಗೆ ರಣವೀರ್​ ಸಿಂಗ್​ ಮತ್ತು ಜಾಹ್ನವಿ ಹೆಸರು ಕೇಳಿ ಬರುತ್ತಿದೆ. ರಣವೀರ್​ ಮತ್ತು ಜಾಹ್ನವಿ ಇದುವರೆಗೂ ಒಟ್ಟಾಗಿ ನಟಿಸಿಲ್ಲ, ಅವರಿಬ್ಬರೂ ಒಟ್ಟಾಗಿ ನಟಿಸಿದರೆ ಸೂಪರ್ರಾಗಿರುತ್ತದೆ ಎಂಬುದು ಅಭಿಮಾನಿಗಳ ಅಭಿಪ್ರಾಯವಾದರೂ, ಅವರಿಬ್ಬರೂ ಒಟ್ಟಿಗೆ ನಟಿಸುತ್ತಾರಾ ಎಂಬುದು ಇನ್ನಷ್ಟೇ ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net