

ಪುನೀತ್ ರಾಜಕುಮಾರ್ ಮತ್ತು ನಿರ್ದೇಶಕ ‘ಭರ್ಜರಿ’ ಚೇತನ್ ಕುಮಾರ್ ಕಾಂಬಿನೇಷನ್ ‘ಜೇಮ್ಸ್’ ಸಿನಿಮಾ ಘೋಷಣೆ ಆಗಿ ನಾಲ್ಕು ವರ್ಷಗಳಾದರೂ, ಕಳೆದ ವರ್ಷವಷ್ಟೇ ಶೂಟಿಂಗ್ ಆರಂಭಿಸಿತ್ತು. ಇದೀಗ ಸದ್ದಿಲ್ಲದೆ, ಶೂಟಿಂಗ್ ಮುಗಿಯುವ ಹಂತಕ್ಕೆ ಬಂದು ನಿಂತಿದೆ. ಮುಂದಿನ 20 ದಿನಗಳಲ್ಲಿ ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಒಡೆಯಲಿದೆ ಚಿತ್ರತಂಡ. ಈಗಷ್ಟೇ ಕೊಪ್ಪಳದ ಹಲವು ಭಾಗಗಳಲ್ಲಿ ಚಿತ್ರೀಕರಣ ಮುಗಿಸಿರುವ ‘ಜೇಮ್ಸ್’ ತಂಡ, ಸದ್ಯದಲ್ಲೇ ಮಾತಿನ ಭಾಗದ ಶೂಟಿಂಗ್ ಮುಗಿಸಿ, ಹಾಡುಗಳತ್ತ ದೃಷ್ಟಿ ಹಾಯಿಸಲಿದೆ. ಮುಂದಿನ ಪ್ಲಾನ್ಗಳೇನು? ಅದನ್ನು ಸ್ವತಃ ನಿರ್ದೇಶಕ ಚೇತನ್ ಕುಮಾರ್ ವಿವರಿಸಿದ್ದಾರೆ.
‘ಚಿತ್ರದ ಟಾಕಿ ಭಾಗ ಬಹುತೇಕ ಮುಕ್ತಾಯವಾಗಿದೆ. ಇನ್ನೇನಿದ್ದರೂ ಭರ್ಜರಿ ಆಕ್ಷನ್ ಸನ್ನಿವೇಶ ಮತ್ತು ಹಾಡಿನ ಚಿತ್ರೀಕರಣ ಶುರುವಾಗಬೇಕಿದೆ. ಈಗಾಗಲೇ ಕಾಶ್ಮೀರದಲ್ಲಿ ಒಂದು ಹಾಡಿನ ಶೂಟಿಂಗ್ ಮುಗಿದಿದೆ. ಇನ್ನೂ ಮೂರು ಹಾಡುಗಳಿವೆ. ಅದ್ದೂರಿ ಸೆಟ್ ಮತ್ತು ಹೊರಾಂಗಣದಲ್ಲಿಯೂ ಹಾಡುಗಳನ್ನು ಸೆರೆಹಿಡಿಯುವ ಯೋಜನೆ ಇದೆ. ಎಲ್ಲ ಸೇರಿಸಿದರೂ ಅಕ್ಟೋಬರ್ ಮೊದಲ ವಾರದಲ್ಲಿ ಸಿನಿಮಾ ಮುಗಿಯಲಿದೆ’ ಎಂಬುದು ಅವರ ಮಾತು. ಪುನೀತ್ಗೆ ಪ್ರಿಯಾ ಆನಂದ್ ಜೋಡಿಯಾಗಿರುವ ಈ ಚಿತ್ರದಲ್ಲಿ, ಟಾಲಿವುಡ್ ನಟ ಶ್ರೀಕಾಂತ್, ಆದಿತ್ಯ ಮೆನನ್, ಅನು ಪ್ರಭಾಕರ್, ಶೈನ್ ಶೆಟ್ಟಿ, ಸಾಧು ಕೋಕಿಲ, ಚಿಕ್ಕಣ್ಣ ಸೇರಿ ಹಲವರಿದ್ದಾರೆ. ಕಿಶೋರ್ ಪತ್ತಿಕೊಂಡ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.