

ಟೊರಾಂಟೊ: 25 ವರ್ಷಗಳ ಹಿಂದೆಯೇ ಹಲವರು ತಗಾದೆ ತೆಗೆದಿದ್ದರು. 'ಟೈಟಾನಿಕ್' ಚಿತ್ರದಲ ಕ್ಲೈಮ್ಯಾಕ್ಸ್ ಸರಿ ಇಲ್ಲ, ನಾಯಕನನ್ನು ಸಾಯಿಸಿದ್ದು ಸರಿಯಾಗಲಿಲ್ಲ, ನಾಯಕ-ನಾಯಕಿ ಇಬ್ಬರನ್ನೂ ಬದುಕಿಸಬೇಕಿತ್ತು ಎಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದ್ದರು. ಅದಕ್ಕೆ ಸರಿಯಾಗಿ, ನಾಯಕ-ನಾಯಕಿ ಇಬ್ಬರೂ ಬದುಕುವುದು ಸಾಧ್ಯವೇ ಇರಲಿಲ್ಲ ಎಂದು ನಿರ್ದೇಶಕ ಜೇಮ್ಸ್ ಕ್ಯಾಮರನ್ ವಾದಿಸಿದ್ದರು. ಈಗ ಈ ವಿಷಯವನ್ನು ವೈಜ್ನಾನಿಕವಾಗಿ ಅವರು ಪ್ರೂವ್ ಮಾಡಿದ್ದಾರಂತೆ.
ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಸಮುದ್ರದಲ್ಲಿ ಮುಳುಗುತ್ತಿರುವ ನಾಯಕ-ನಾಯಕಿಗೆ ಒಂದು ಸಣ್ಣ ಮರದ ಬಾಗಿಲು ಸಿಗುತ್ತದೆ. ಅದರ ಮೇಲೆ ನಾಯಕಿಯನ್ನು ಕೂರಿಸುವ ನಾಯಕ, ನೀರನಲ್ಲೇ ಉಳಿಯುತ್ತಾರೆ. ಆ ಕೊರೆಯುವ ಚಳಿಗೆ ಹಿಮಗಟ್ಟಿ ಸಾಯುತ್ತಾನೆ. ಒಂದು ಪಕ್ಷ, ನಾಯಕನಿಗೂ ನಾಯಕಿ ಬಾಗಿಲ ಮೇಲೆ ಒಂದಿಷ್ಟು ಸ್ಥಳ ಕೊಟ್ಟಿದ್ದರೆ, ಅವನು ಬದುಕಬಹುದಿತ್ತು ಎಂಬ ವಾದ ಕೇಳಿ ಬಂದಿತ್ತು. ಸ್ವಲ್ಪ ವೈಜ್ನಾನಿಕವಾಗಿ ಯೋಚಿಸಬಹುದಿತ್ತು ಎಂದು ಹೇಳಲಾಗಿತ್ತು.
ಆದರೆ, ಇದೊಂದು ರೋಮಿಯೋ-ಜ್ಯೂಲಿಯಟ್ ಮಾದರಿಯ ಕಥೆಯಾದ್ದರಿಂದ, ಇಲ್ಲಿ ಪ್ರೀತಿಯ ಜತೆಗೆ ತ್ಯಾಗವು ಸಹ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನಿರ್ದೇಶಕರು ವಾದಿಸಿದ್ದರು. ಇಲ್ಲಿ ಅವರಿಬ್ಬರ ಪ್ರೀತಿ ಎಂಥದ್ದು ಎಂಬುದನ್ನು ತ್ಯಾಗ ನಿರೂಪಿಸುತ್ತದೆ, ಇದೊಂದು ಸೃಜನಶೀಲ ಕಲ್ಪನೆಯೇ ಹೊರತು, ಇಲ್ಲಿ ಫಿಸಿಕ್ಸ್ಗೆ ಜಾಗವಿಲ್ಲ ಎಂದು ನಿರ್ದೇಶಕ ಕ್ಯಾಮರಾನ್ ಹೇಳಿದ್ದರು. ಈಗ ಅವರು ತಮ್ಮ ವಾದಕ್ಕೆ ವೈಜ್ನಾನಿಕವಾದ ಪುರಾವೆಗಳನ್ನು ಒದಗಿಸಿದ್ದಾರೆ.
ಹೌದು, ಈ ನಿಟ್ಟಿನಲ್ಲಿ ಕ್ಯಾಮರಾನ್ ಒಂದು ಸಂಶೋಧನೆ ಮಾಡಿದ್ದಾರೆ. ಅಂತಹ ವಾತಾವರಣದಲ್ಲಿ ಇಬ್ಬರು ಆ ರಾತ್ರಿ ಬದುಕುವುದಕ್ಕೆ ಸಾಧ್ಯವೇ ಇಲ್ಲ ಎಂದು ಅವರು ಪ್ರೂವ್ ಮಾಡಿದ್ದಾರೆ. 'ಈ ಬಗ್ಗೆ ತಕರಾರು ಕೇಳಿ ಬಂದ ಹಿನ್ನೆಲೆಯಲ್ಲಿ ನಾವು ಒಂದು ಪ್ರಯೋಗ ಮಾಡಿದ್ದೇವೆ. ಇಡೀ ಸನ್ನಿವೇಶವನ್ನು ಮರುಸೃಷ್ಟಿ ಮಾಡಿದ್ದೇವೆ. ಅದರಲ್ಲಿ ಇಬ್ಬರಲ್ಲಿ ಒಬ್ಬರು ಮಾತ್ರ ಬದುಕುವುದಕ್ಕೆ ಸಾಧ್ಯವಿತ್ತು ಎಂದು ಪ್ರೂವ್ ಮಾಡಿದ್ದೇವೆ' ಎನ್ನುತ್ತಾರೆ.
ಆದರೆ, ಅವರು ಈ ವಿಷಯವನ್ನು ಈಗಲೇ ಬಹಿರಂಗ ಮಾಡುವುದಿಲ್ಲ. ಮುಂದಿನ ಫೆಬ್ರವರಿಯಲ್ಲಿ ಅವರು ತಮ್ಮ ಸಂಶೋಧನೆಯ ಪೂರ ಸಾರವನ್ನು ತಿಳಿಸಲಿದ್ದಾರಂತೆ. ಫೆಬ್ರವರಿಯಲ್ಲೇ ಹಾಗೆ ಮಾಡುವುದಕ್ಕೆ ಕಾರಣವೂ ಇದೆ. 2023ರ ಪ್ರೇಮಿಗಳ ದಿನದಂದು ಅವರು 'ಟೈಟಾನಿಕ್' ಚಿತ್ರವನ್ನು 4ಕೆ ರೆಸಲ್ಯೂಷನ್ನಲ್ಲಿ ಪುನಃ ಬಿಡುಗಡೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಜಾಕ್ ಯಾಕೆ ಬದುಕುವುದಕ್ಕೆ ಸಾಧ್ಯವಾಗಲಿಲ್ಲ ಎಂದು ಅವರು ವೈಜ್ನಾನಿಕವಾಗಿ ತಿಳಿಸಲಿದ್ದಾರೆ.