ಜೈಲರ್ ಸಿನಿಮಾ ವಿಮರ್ಶೆ: ಮಾಸ್ ಮನರಂಜನೆ ನೀಡುವ ಸಿನಿಮಾ

jailer
Published on

ಚಿತ್ರ: ಜೈಲರ್
ನಿರ್ದೇಶನ: ನೆಲ್ಸನ್ ದಿಲೀಪ್‌ಕುಮಾರ್
ನಿರ್ಮಾಣ: ಕಲಾನಿಧಿ ಮಾರನ್
ತಾರಾಗಣ: ರಜಿನಿಕಾಂತ್, ವಿನಾಯಕನ್, ವಸಂತ್ ರವಿ, ರಮ್ಯಾ ಕೃಷ್ಣ, ಶಿವರಾಜಕುಮಾರ್, ಮೋಹನ್‌ಲಾಲ್, ಜಾಕಿ ಶ್ರ್ಾ ಮುಂತಾದವರು
ಸ್ಟಾರ್: 3.5

|ಪ್ರಮೋದ ಮೋಹನ ಹೆಗಡೆ

ಸೂಪರ್ ಸ್ಟಾರ್ ರಜಿನಿಕಾಂತ್ ಸಿನಿಮಾ ಎಂದರೆ ಅದು ಮಾಸ್ ಎಂಟರ್‌ಟೇನ್ಮೆಂಟ್ ಜತೆಗೆ ರಜಿನಿ ಸ್ಟೈಲ್‌ನಿಂದ ತುಂಬಿರುತ್ತದೆ ಎನ್ನುವುದು ನಂಬಿಕೆ. ಹೀಗಾಗಿ ರಜಿನಿಕಾಂತ್ ಸಿನಿಮಾ ರಿಲೀಸ್ ಆಗುತ್ತಿದೆ ಎಂದರೆ ಮೊದಲ ದಿನವೇ ಚಿತ್ರಮಂದಿರಗಳಲ್ಲಿ ನೋಡುವುದು ಅನೇಕರಿಗೆ ಸಂಪ್ರದಾಯ. ಸಿನಿಮಾದ ಆರಂಭದಲ್ಲಿ ಬರುವ ‘ಸೂಪರ್ ಸ್ಟಾರ್ ರಜಿನಿಕಾಂತ್’ ಎಂಬ ಟೈಟಲ್ ಇಂದಿಗೂ ಅನೇಕರಿಗೆ ರೋಮಾಂಚನ ನೀಡುತ್ತದೆ. ಇಂತಹ ನಿರೀಕ್ಷೆ ಇಟ್ಟುಕೊಂಡು ಸಿನಿಮಾ ನೋಡುವವರಿಗೆ ‘ಜೈಲರ್’ ಮೋಸ ಮಾಡುವುದಿಲ್ಲ. ರಜಿನಿ ಅಭಿನಯದ ಕಳೆದ ಒಂದೆರಡು ಸಿನಿಮಾಗಳು ನಿರೀಕ್ಷೆಯ ಮಟ್ಟ ತಲುಪಿರಲಿಲ್ಲ. ಇದೀಗ ‘ಜೈಲರ್’ ಮೂಲಕ ಭರ್ಜರಿಯಾಗಿ ತೆರೆಯ ಮೇಲೆ ಮೆರೆದಿದ್ದಾರೆ ತಲೈವಾ ರಜಿನಿ. 71 ವರ್ಷದ ಸೂಪರ್‌ಸ್ಟಾರ್ ಅಭಿನಯದ 169ನೇ ಚಿತ್ರವಿದು. ಈ ವಯಸ್ಸಿನಲ್ಲೂ ಅಷ್ಟೇ ಉತ್ಸಾಹದಿಂದ ಅಭಿನಯಿಸುವ ರಜಿನಿಕಾಂತ್ ಅವರನ್ನು ಮೆಚ್ಚಲೇಬೇಕು. ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್‌ಗೂ ಈ ಚಿತ್ರ ಒಂದೊಳ್ಳೆ ಕಂಬ್ಯಾಕ್ ಎಂದರೆ ತಪ್ಪಾಗುವುದಿಲ್ಲ.

‘ಜೈಲರ್’ ಸಿನಿಮಾದ ಕಥೆಯಲ್ಲಿ ವಿಶೇಷ ಅನಿಸುವಂಥ ಅಂಶಗಳು ಸಿಗದಿರಬಹುದು. ಟ್ರೇಲರ್‌ನಲ್ಲಿ ನೋಡಿದಾಗ ಬಹುತೇಕ ಕಥೆ ಅರ್ಥವಾಗಿಬಿಡುತ್ತದೆ. ಆದರೆ, ಈ ಹಿಂದೆ ನಟ ವಸಂತ್ ರವಿ ಹೇಳಿದಂತೆ, ಚಿತ್ರವನ್ನು ನಿರೂಪಿಸಿರುವ ರೀತಿ ಅಚ್ಚುಕಟ್ಟಾಗಿದೆ. ಸತ್ಯ, ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ಕಾನೂನು ರಕ್ಷಣೆ ಮಾಡುವ ಪೊಲೀಸ್ ಅಧಿಕಾರಿಯೊಬ್ಬನ ಕಥೆಯನ್ನು ಹೇಳುತ್ತಲೇ ತಂದೆ-ಮಗನ ಬಾಂಧವ್ಯ, ಕುಟುಂಬದ ಬಗ್ಗೆ ಕಾಳಜಿ ಸೇರಿ ಹಲವು ಭಾವನಾತ್ಮಕ ಅಂಶಗಳಿಗೂ ಅವಕಾಶ ಕೊಟ್ಟು ಸಿನಿಮಾ ಮಾಡಲಾಗಿದೆ. ಒಂದೆಡೆ ಇಂಟರ್‌ವಲ್ ಬ್ಲಾಕ್, ್ಲ್ಯಾಶ್‌ಬ್ಯಾಕ್ ಸನ್ನಿವೇಶ, ರಜಿನಿಕಾಂತ್ ಹಾಗೂ ವಸಂತ್ ರವಿ ಅಭಿನಯ ಖುಷಿ ಕೊಡುತ್ತದೆ. ಮತ್ತೊಂದೆಡೆ ಕೆಲವು ಹಾಸ್ಯದ ಸನ್ನಿವೇಶಗಳು, ಜಾಕಿ ಶ್ರ್ಾ, ರಮ್ಯಾ ಕೃಷ್ಣ, ತಮನ್ನಾ, ಮಿರ್ನಾ ಮೆನನ್ ಪಾತ್ರಗಳು ಇನ್ನಷ್ಟು ಪಕ್ವವಾಗುವ ಅವಕಾಶವಿತ್ತು. ರಜಿನಿಕಾಂತ್ ಜತೆಗೆ ಸಿನಿಮಾದ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದು ಖಳನಾಯಕನ ಪಾತ್ರ ಮಾಡಿರುವ ವಿನಾಯಕನ್ ಅಭಿನಯ.

ಇನ್ನು ಇವೆಲ್ಲದರ ಜತೆ ಶಿವರಾಜಕುಮಾರ್ ಮುಖ್ಯವಾದ ಎರಡು ಘಟ್ಟಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಆಗೆಲ್ಲ ಶಿಳ್ಳೆ ಹೊಡೆಯದೇ ಕೂರುವುದು ಕಷ್ಟವಾಗುವಂತೆ ತೋರಿಸಿದ್ದಾರೆ. ಅದೇ ರೀತಿ ಮೋಹನ್‌ಲಾಲ್ ವಿಭಿನ್ನ ಲುಕ್ ಹಾಗೂ ಸ್ಟೈಲ್‌ನಲ್ಲಿ ಗಮನಸೆಳೆಯುತ್ತಾರೆ. ಅನಿರುದ್ಧ ರವಿಚಂದರ್ ಸಂಗೀತದ ಜತೆ ತೆರೆಯ ಮೇಲೆ ರಜಿನಿಕಾಂತ್ ಅಬ್ಬರವನ್ನು ನೋಡಿ ಎರಡೂ ಮುಕ್ಕಾಲು ಗಂಟೆ ಮಾಸ್ ಮನರಂಜನೆ ನಿರೀಕ್ಷಿಸುವವರು ಹಾಗೂ ರಜಿನಿ ಅಭಿಮಾನಿಗಳಿಗೆ ‘ಜೈಲರ್’ ಇಷ್ಟವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net