ಟಾಲಿವುಡ್​ಗೆ ಜಾಹ್ನವಿ? ಜ್ಯೂ.ಎನ್​ಟಿಆರ್​ ಜತೆಗೆ ನಟಿಸುವ ಸಾಧ್ಯತೆ ...

Jahnvi Kapoor
Published on

ಮುಂಬೈ: ಶ್ರೀದೇವಿ ಅವರ ಮಗಳು ಜಾಹ್ನವಿ ಕಪೂರ್​ ಅವರನ್ನು ತೆಲುಗು ಚಿತ್ರರಂಗಕ್ಕೆ ಪರಿಚಯಿಸುವುದಕ್ಕೆ ಟಾಲಿವುಡ್​ನ ದೊಡ್ಡ ನಿರ್ಮಾಪಕರ ನಡುವೆ ಪೈಪೋಟಿ ನಡೆಯುತ್ತಿರುವುದು ಹಳೆಯ ಸುದ್ದಿ. ಈಗ ಮೈತ್ರಿ ಮೂವಿ ಮೇಕರ್ಸ್​ ಸಂಸ್ಥೆಯಡಿ ನಿರ್ಮಾಣವಾಗುತ್ತಿರುವ ಜ್ಯೂನಿಯರ್​ ಎನ್​ಟಿಆರ್​ ಅಭಿನಯದ ಹೊಸ ಚಿತ್ರದಲ್ಲಿ ಜಾಹ್ನವಿ ಟಾಲಿವುಡ್​ಗೆ ಎಂಟ್ರಿ ಕೊಡುವ ಸಾಧ್ಯತೆ ಹೆಚ್ಚು ಕಾಣುತ್ತಿದೆ.

ಜಾಹ್ನವಿ ತಾಯಿ ಶ್ರೀದೇವಿ ತೆಲುಗು ಚಿತ್ರರಂಗದಿಂದ ತಮ್ಮ ವೃತ್ತಿಜೀವನ ಪ್ರಾರಂಭಿಸಿ, ಬಾಲಿವುಡ್​ನಲ್ಲಿ ದೊಡ್ಡ ಹೆಸರು ಮಾಡಿದವರು. ಆದರೆ, ಜಾಹ್ನವಿ ಬಾಲಿವುಡ್​ನಲ್ಲಿ ಎಂಟ್ರಿ ಕೊಟ್ಟು, ಅಲ್ಲೇ ಹೆಚ್ಚುಹೆಚ್ಚು ಚಿತ್ರಗಳನ್ನು ಮಾಡುತ್ತಿದ್ದಾರೆ. ಹಾಗಾಗಿ, ಅವರನ್ನು ತೆಲುಗು ಚಿತ್ರರಂಗದತ್ತ ಕರೆತರಬೇಕು ಎಂದು ತೆಲುಗಿನ ಮೂರು ಜನಪ್ರಿಯ ನಿರ್ಮಾಣ ಸಂಸ್ಥೆಗಳು ಪ್ರಯತ್ನ ನಡೆಸಿದವು.

ಹಾರಿಕಾ ಹಾಸಿನಿ ಕ್ರಿಯೇಷನ್ಸ್​ ಸಂಸ್ಥೆಯು ಮಹೇಶ್​ ಬಾಬು ಅಭಿನಯದ ಚಿತ್ರದಲ್ಲಿ ಜಾಹ್ನವಿ ನಾಯಕಿಯಾಗುತ್ತಾರೆ ಎಂಬ ಸುದ್ದಿ ಇತ್ತು. ಆದರೆ, ಆ ಚಿತ್ರಕ್ಕೆ ಪೂಜಾ ಹೆಗ್ಡೆ ಬಂದಿದ್ದಾರೆ. ದಿಲ್​ ರಾಜು ಅವರ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್​ ಸಂಸ್ಥೆಯು ನಿರ್ಮಿಸುತ್ತಿರುವ ರಾಮ್​ಚರಣ್​ ತೇಜ ಅಭಿನಯದ ಹೊಸ ಚಿತ್ರಕ್ಕೆ ಜಾಹ್ನವಿ ಬರಬಹುದು ಎಂದು ಹೇಳಲಾಗಿತ್ತು. ಆದರೆ, ಆ ಚಿತ್ರಕ್ಕೆ ಕಿಯಾರಾ ಅಡ್ವಾಣಿ ನಾಯಕಿ ಆದರು. ಇನ್ನು, ಮೈತ್ರಿ ಮೂವಿ ಮೇಕರ್ಸ್​ ಸಂಸ್ಥೆಯಡಿ ನಿರ್ಮಾಣವಾಗುತ್ತಿರುವ ಜ್ಯೂನಿಯರ್​ ಎನ್​ಟಿಆರ್​ ಅಭಿನಯದ ಹೊಸ ಚಿತ್ರದಲ್ಲಿ ಜಾಹ್ನವಿ ಮೊದಲ ಆಯ್ಕೆ ಎಂಬ ಸುದ್ದಿ ಇತ್ತು. ಆ ಸುದ್ದಿ ಈಗ ನಿಜವಾಗುತ್ತಿರುವ ಹಾಗೆ ಕಾಣುತ್ತಿದೆ.

ಮೂಲಗಳ ಪ್ರಕಾರ, ಕೊರಟಾಲ ಶಿವ ನಿರ್ದೇಶನದ 'ಎನ್​ಟಿಆರ್​ 30' ಚಿತ್ರ ಸದ್ಯದಲ್ಲೇ ಪ್ರಾರಂಭವಾಗಲಿದ್ದು, ಈಗಾಗಲೇ ಜಾಹ್ನವಿ ಜತೆಗೆ ಮಾತುಕಥೆ ನಡೆಸಲಾಗಿದೆಯಂತೆ. ಜಾಹ್ನವಿ ಸಹ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದು, ಸದ್ಯದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ.

ಅಂದಹಾಗೆ, ಜಾಹ್ನವಿ ಕಪೂರ್​ ಅಭಿನಯದ ಹೊಸ ಚಿತ್ರ 'ಮಿಲಿ' ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ಮಲಯಾಳಂನ 'ಹೆಲೆನ್​' ಚಿತ್ರದ ರೀಮೇಕ್​ ಇದಾಗಿದ್ದು, ಈ ಚಿತ್ರದ ಮೇಲೆ ಜಾಹ್ನವಿ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net