ಸೌತ್ ನಟನೊಂದಿಗೆ ಅದೃಷ್ಟ ಪರೀಕ್ಷೆಗಿಳಿಯಲಿರುವ ಜಾಹ್ನವಿ ಕಪೂರ್!

Published on
ತೆಲುಗು ನಟ ವಿಜಯ್‌ ದೇವರಕೊಂಡ ಅವರು ಸೆಲ್ಫ್ ಮೇಡ್ ಸ್ಟಾರ್ ಎಂದರೇ ತಪ್ಪಾಗುವುದಿಲ್ಲ. ಸದ್ಯ, ವಿಜಯ್ ದೇವರಕೊಂಡ ಅವರ 'ಲೈಗರ್' ಸಿನಿಮಾ ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ತೆರೆಕಾಣಲಿದೆ. ಈ ಮೂಲಕ, ನಟ ವಿಜಯ್ ಬಾಲಿವುಡ್‌ನಲ್ಲಿ ತಮ್ಮ ಛಾಪು ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ, ವಿಜಯ್ ಜತೆ ನಟಿಸಲು ಬಾಲಿವುಡ್‌ನ ನಟಿಯೊಬ್ಬರು ಸಿದ್ಧವಾಗಿದ್ದಾರೆ ಎಂಬ ಸುದ್ದಿಯೊಂದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹೌದು, ವಿಜಯ್‌ ಜೊತೆಗೆ ಅಭಿನಯಿಸಲು ಶ್ರೀದೇವಿ ಪುತ್ರಿ ನಟಿ ಜಾಹ್ನವಿ ಕಪೂರ್ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅತಿಲೋಕ ಸುಂದರಿಯ ಪುತ್ರಿ ಈಗ ಬಾಲಿವುಡ್ ಸಿನಿಮಾರಂಗದಲ್ಲಿ ಸಕ್ರಿಯವಾಗಿದ್ದು, ಈಗ ವಿಜಯ್‌ ಜೊತೆಗೆ ಅದೃಷ್ಟ ಪರೀಕ್ಷಿಸಿಕೊಳ್ಳಲು ರೆಡಿಯಾಗಿದ್ದಾರೆ.
ನಟಿ ಜಾಹ್ನವಿ ಕಪೂರ್ ಕೇವಲ ಮೂರು ಸಿನಿಮಾಗಳನ್ನು ಮಾತ್ರ ಕಾಣಿಸಿಕೊಂಡಿದ್ದಾರೆ. 'ಧಡಕ್' ಚಿತ್ರದ ಮೂಲಕ ಜಾಹ್ನವಿ ಬಾಲಿವುಡ್‌ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು, ಆ ಮೊದಲ ಸಿನಿಮಾ ದೊಡ್ಡ ಯಶಸ್ಸು ಕಂಡಿಲ್ಲ. ನಂತರ 'ಗುಂಜನ್ ಸಕ್ಸೇನ', 'ರೂಹಿ' ಸಿನಿಮಾಗಳಲ್ಲಿ ಅಭಿನಯಿಸಿದ್ದರೂ, ಈ ಚಿತ್ರಗಳು ಕೂಡ ಜಾಹ್ನವಿಗೆ ಹೆಚ್ಚು ಖ್ಯಾತಿ ತಂದುಕೊಡುವಲ್ಲಿ ಸೋತಿವೆ. ಹಾಗಾಗಿ, ಸೌತ್​ನಲ್ಲಿ ಬಹಳಷ್ಟು ಖ್ಯಾತಿ ಪಡೆದು, ಇದೀಗ ಬಾಲಿವುಡ್​ನಲ್ಲಿ ಹೆಸರು ಮಾಡಲು ಹೊರಟಿರುವ ವಿಜಯ್ ಜತೆ ಜಾಹ್ನವಿ ಒಂದು ಉತ್ತಮ ಸಿನಿಮಾ ಮಾಡಿ ಹೆಸರು ಮಾಡಲು ಯೋಚಿಸುತ್ತಿದ್ದಾರೆ ಎನ್ನಲಾಗಿದೆ.
ಅಂದಹಾಗೆ, ಎರಡನೇ ಪ್ರಯತ್ನದಲ್ಲಿ ವಿಜಯ್‌ಗೆ ಸಿಕ್ಕಿದಾರಂತೆ ನಟಿ ಜಾಹ್ನವಿ. ಹೌದು, ವಿಜಯ್ ದೇವರಕೊಂಡ ಜತೆ ಸಿನಿಮಾ ಮಾಡುವ ಅವಕಾಶ ಜಾಹ್ನವಿ ಅವರನ್ನು ಅರಸಿ ಹೋಗಿದ್ದು ಇದೇ ಮೊದಲೇನಲ್ಲ. ಸದ್ಯ ಬಿಡುಗಡೆಗೆ ರೆಡಿಯಾಗಿರುವ 'ಲೈಗರ್' ಸಿನಿಮಾಗಾಗಿ ಜಾಹ್ನವಿ ಅವರನ್ನು ಸಂಪರ್ಕಿಸಲಾಗಿತ್ತು. ವಿಜಯ್ ದೇವರಕೊಂಡ, ನಿರ್ದೇಶಕ ಪುರಿ ಜಗನ್ನಾಥ್ ಇಬ್ಬರೂ ತಮ್ಮ 'ಲೈಗರ್' ಸಿನಿಮಾಗೆ ಜಾಹ್ನವಿಯನ್ನು ಹೀರೋಯಿನ್ ಮಾಡಿ ಕಾಲ್ ಶಿಟ್ ಗಿಟ್ಟಿಸಿಕೊಳ್ಳಲು ಹರಸಾಹಸ ಪಟ್ಟಿದ್ದರು. ಈ ಚಿತ್ರಕ್ಕೆ ಜಾಹ್ನವಿ ಸಿಗದೇ ಇದ್ದಾಗ, ನಟಿ ಅನನ್ಯ ಪಾಂಡೆಯನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು.
ಬಹುಶಃ, ಈಗ ಕಾಲ ಕೂಡಿ ಬಂದಿದ್ದು, ವಿಜಯ್ ಜೊತೆಗೆ ಜಾಹ್ನವಿ ನಟಿಸಲು ಕೊನೆಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಹೀಗಾಗಿ, ಒಂದೇ ಚಿತ್ರಕ್ಕಾಗಿ ಪುರಿ ಜಗನ್ನಾಥ್, ವಿಜಯ್ ದೇವರಕೊಂಡ, ಜಾಹ್ನವಿ ಕಪೂರ್ ಕೆಲಸ ಮಾಡಲಿದ್ದಾರೆ. 'ಲೈಗರ್' ಸಿನಿಮಾದ ಕೆಲಸ ಮುಗಿದ ನಂತರ, ವಿಜಯ್ ಜೊತೆಗೆ ಮತ್ತೊಂದು ಸಿನಿಮಾ ಮಾಡಿಲಿದ್ದಾರೆ ಪುರಿ ಜಗನ್ನಾಥ್. ಆ ಸಿನಿಮಾಗಾಗಿ ಜಾಹ್ನವಿಯ ಕಾಲ್ ಶೀಟ್ ಕೇಳಲಾಗಿದ್ದು, ನಿರ್ಮಾಪಕ ಕರಣ್ ಜೋಹರ್ ಮಧ್ಯಸ್ಥಿಕೆಯಲ್ಲಿ ಜಾಹ್ನವಿ ಕಪೂರ್ ವಿಜಯ್ ಜತೆಗೆ ನಾಯಕಿ ಆಗಲು ಒಪ್ಪಿದ್ದಾರೆ. ಹಾಗಿದ್ದರೆ, ನಟಿ ಜಾಹ್ನವಿ ಕಪೂರ್, ವಿಜಯ್ ದೇವರಕೊಂಡ ಹಿಟ್ ಜೋಡಿಯಾಗುತ್ತಾರಾ ಎಂಬುದು ಕಾದು ನೋಡಬೇಕಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net