

ಕನ್ನಡ ಚಿತ್ರರಂಗದಲ್ಲಿ ನಟ-ನಟಿಯರು ಡ್ರಗ್ಸ್ ಜಾಲದಲ್ಲಿ ಸಿಲುಕಿರುವ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯೆ, ಹಿರಿಯ ನಟ ಜಗ್ಗೇಶ್ ಸಹ ಈ ವಿಷಯದ ಬಗ್ಗೆ ಮಾತನಾಡಿದ್ದರು. ಭಾನುವಾರ ಈ ವಿಷಯದ ಕುರಿತಾಗಿ ಇನ್ನಷ್ಟು ಟ್ವೀಟ್ಗಳನ್ನು ಅವರು ಮಾಡಿದ್ದಾರೆ.
'ಇಂದು ಏನೇ ಮಾತನಾಡಿದರೂ ಅದಕ್ಕೆ ನೂರು ತರಹ ಪರವಿರೋಧ ಚರ್ಚೆಯಾಗುತ್ತದೆ. ಉಪ್ಪು ತಿಂದವರು ನೀರು ಕುಡಿಯಲಿ. ಬದುಕುವ ಹಣವಿದ್ದವರು ಹಿಮಾಲಯ ಏರುತ್ತಾರೆ. ಬದುಕು ಹಗುರವಾಗಿ ಕಂಡವರು ಸ್ಮಶಾನ ಸೇರುತ್ತಾನೆ. ಎಲ್ಲವೂ ಅವರವರ ಹಣೆಬರಹ' ಎಂದು ಜಗ್ಗೇಶ್ ಅಭಿಪ್ರಾಯಪಟ್ಟಿದ್ದಾರೆ.
ಹಿಂದೊಮ್ಮೆ 30 ಸಿನಿಮಾಗಳಲ್ಲಿ ನಟಿಸಿದರೂ ನಿರ್ಮಾಪಕರ ಮನೆ ಮುಂದೆ ಭಿಕ್ಷುಕರಂತೆ ಸಂಭಾವನೆಗೆ ಕಾಯಬೇಕಿತ್ತು ಎಂದಿರುವ ಅವರು, 'ಸಂಭಾವನೆ ಕೊಟ್ಟ ತಕ್ಷಣ ರೇಷನ್ ಅಂಗಡಿ ಮುಂದೆ ಅಕ್ಕಿ-ಸೀಮೆ ಎಣ್ಣೆಗೆ ಕ್ಯೂ ನಿಂತವರು ನಾವು. ಇಂದು ಎರಡು ಸಿನಿಮಾಗೆ ಕುಬೇರನ ಮಕ್ಕಳು. ಹೇಗೆ ಇಂಥಾ ಕ್ಯಾಚ್ ಹಾಕಿಕೊಳ್ಳುತ್ತಾರೋ, ನನಗೆ 57ನೇ ವರ್ಷಕ್ಕೂ ಅರ್ಥವಾಗಿಲ್ಲ' ಎಂದು ಜಗ್ಗೇಶ್ ಹೇಳಿಕೊಂಡಿದ್ದಾರೆ.
ಇನ್ನು ದುಡ್ಡು ಕೇಳಿದ್ದಿಕ್ಕೆ ತಮ್ಮ ತಂದೆಯಿಂದ ಚಪ್ಪಲಿಯಿಂದ ಹೊಡೆಸಿಕೊಂಡಿದ್ದನ್ನು ನೆನಪಿಸಿಕೊಂಡಿರುವ ಜಗ್ಗೇಶ್, 'ಅಪ್ಪನಿಗೆ 1981ರಲ್ಲಿ 5 ಸಾವಿರ ಸಾಲ ಕೇಳಿದ್ದಕ್ಕೆ ಸಾರ್ವಜನಿಕವಾಗಿ ಚಪ್ಪಲಿಯಲ್ಲಿ ಹೊಡೆದು, ತಾಕತ್ತಿದ್ದರೆ ಹೋಗಿ ದುಡಿ ಎಮದು ಹೊರ ದೂಡಿದ. ಹಟಕ್ಕೆ ಬಿದ್ದು ದುಡಿಮೆಗೆ ಮದ್ರಾಸಿಗೆ ಹೋದೆ. ಅಪ್ಮಾನ ಮಾಡಿ ಅಂದು ಅಪ್ಪ ನನಗೆ ಜೀವನ ಕಲಿಸಿದ. ಇಂದು ಮಕ್ಕಳನ್ನು ಹಾಗೆ ಬೆಳೆಸುವ ತಂದೆಯೂ ಇಲ್ಲ, ತಲೆಮಾರೂ ಇಲ್ಲ. ಈಗ ಎಲ್ಲ ಕ್ಷೇತ್ರಗಳಲ್ಲಿ ಏಣಿದ್ದರೂ, ನಾನೂ ನನ್ನಿಷ್ಟದ ಜೀವನ' ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕನ್ನಡದಲ್ಲೂ ವಿದ್ಯಾಸುಂದರಿ ಬೆಂಗಳೂರು ನಾಗರತ್ಮಮ್ಮ
'ನನ್ನ ಕನಸು ನನ್ನ ಜೀವನ ಅಂತ ಬಂದವರ ಕಾಲಮಾನದವ ನಾನು. ಬಣ್ಣ ಹಚ್ಚುವ ಮುನ್ನ ಶಾರದೆ ಸ್ಮರಿಸಿ ಬಣ್ಣಕ್ಕೆ ಮುಖ ಕೊಡುತ್ತಿದ್ದೆವು. ಕಲಾವಿದರು ಅಂತ ಯಾರಾದರೂ ಕರೆದರೆ ಊಟಕ್ಕೆ ಹೋಗಿ ಎರಡು ಪೆಗ್ಗೆ ಸೀಮಿತವಾಗಿತ್ತು ನಮ್ಮ ಕಾಲ. ಇಂದು ನಶೆ ಸದ್ದಿನದೇ ಚರ್ಚೆ ಆಗಿಬಿಟ್ಟಿದೆ. ಇದರ ಬಗ್ಗೆ ಮಾತಾಡಿದರೆ ಸಾಕು, ಪರವಿರೋಧದ ಅನಿಷ್ಟ ಮನದ ನೆಮ್ಮದಿಗೆ ಭಂಗ, ನಿಮ್ಮ ಹಣೆಬರಹ' ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.