

ಬೆಂಗಳೂರು: ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ನಮ್ಮನ್ನೆಲ್ಲ ಅಗಲಿ ಇಂದಿಗೆ ಒಂದು ವರ್ಷ ಕಳೆದಿದೆ. ಆದರೂ, ಇಂದಿಗೂ ಅಪ್ಪು ನಮ್ಮ ನಡುವೆ ಇಲ್ಲ ಎಂಬುದನ್ನು ಅರಗಿಸಿಕೊಳ್ಳಲು ಆಗುವುದಿಲ್ಲ. ತಮ್ಮ ಸರಳತೆ ಮತ್ತು ಮಾನವೀಯ ಗುಣಗಳಿಂದಲೇ ಅಸಂಖ್ಯಾತ ಅಭಿಮಾನಿಗಳ ಮನದಲ್ಲಿ ಅಪ್ಪು ಮನೆ ಮಾಡಿದ್ದಾರೆ. ಜೊತೆಗಿರದ ಜೀವ ಎಂದಿಗೂ ಜೀವಂತ ಎನ್ನುವಂತೆ ಪ್ರತಿ ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಅಭಿಮಾನಿಗಳು ಪುನೀತ್ರನ್ನು ನೆನೆಯುತ್ತಿದ್ದಾರೆ.
ನಟ ಜಗ್ಗೇಶ್ ಮತ್ತು ಪುನೀತ್ ರಾಜ್ಕುಮಾರ್ ಆಪ್ತಮಿತ್ರರು. ಇವರಿಬ್ಬರ ಹುಟ್ಟುಹಬ್ಬ (ಮಾ.17) ಒಂದೇ ದಿನ. ಇದೀಗ ನಟ ಜಗ್ಗೇಶ್ ಅಪ್ಪು ಜೊತೆಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಳೆಯ ಫೋಟೋವೊಂದನ್ನು ಪೋಸ್ಟ್ ಮಾಡಿ ಹಳೆಯ ನೆನಪುಗಳನ್ನು ನೆನಪಿಸಿಕೊಂಡಿದ್ದಾರೆ ಜಗ್ಗೇಶ್.
'ರಾಘವೇಂದ್ರ ರಾಜ್ಕುಮಾರ್ ಮದುವೆಗೆ ನನ್ನನ್ನು ವಜ್ರೇಶ್ವರಿ ಕಂಬೈನ್ಸ್ ಮ್ಯಾನೇಜರ್ ಕಂಠೀರವ ಕುಮಾರ್ ಆಹ್ವಾನಿಸಿದ್ದರು. ಮನೆಯ ಮದುವೆ ಸಡಗರದಲ್ಲಿ ಬಾಗಿಯಾಗುವ ಸೌಭಾಗ್ಯ ನನಗೆ. ಪತ್ನಿ ಪರಿಮಳನಿಗೆ ತಯಾರಾಗಲು ಹೇಳಿದೆ. ಆ ಸಮಯದಲ್ಲಿ ನನ್ನ ಬಳಿ ಇದ್ದ ಬುಲೇಟ್ ಬೈಕ್ ಏರಿ ಪುನೀತ ಫಾರ್ಮ್ಗೆ ಹೋದೆವು. ಈ ವೇಳೆ ರಾಜ್ಕುಮಾರ್ ಅವರು ಕೂಗಿ ಕರೆದು, ಮೈಸವರಿ ಅವರೇ ಕುಡಿಯಲು ಪಾನಿಯ ನೀಡಿದರು. ಬಂದವರಿಗೆಲ್ಲಾ ನನ್ನ ಪರಿಚಯಿಸಿದರು. ಈ ವೇಳೆ ಪುನೀತನನ್ನು ಕರೆದು ಇವ ನಮ್ಮ ರಜನಿಕಾಂತ ಎಂದು ನನ್ನನ್ನು ಪರಿಚಯಿಸಿದರು. ಬಾಲಕನಾಗಿದ್ದ ಪುನೀತ್, ನನ್ನನ್ನು ಆಶ್ಚರ್ಯದಿಂದ ನೋಡಿದ್ದ' ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.
ಕೆಲದಿನದ ನಂತರ ಶಿವಣ್ಣನ ರಣರಂಗ ಚಿತ್ರದ ಕ್ಲೈಮ್ಯಾಕ್ಸ್ ಸಮಯದಲ್ಲಿ ವೆಂಕಟೇಶ ಎಂಬ ಜೂನಿಯರ್ ಆರ್ಟಿಸ್ಟ್ ಲೋ ತಗಳೋ ರಾಜಣ್ಣನ ಜೊತೆ ಫೋಟೊ ಎಂದು ಹೇಳಿದ್ದ. ಆನಂದ ತಡೆಯಲಾಗಲಿಲ್ಲಾ. ರಾಜಣ್ಣನ ಜೊತೆ ಫೋಟೊ ಅಸಾಧ್ಯ ಎಂಬ ಕಾಲದಲ್ಲಿ, ಫೋಟೋ ತೆಗೆಸಿಕೊಳ್ಳುವ ಅವಕಾಶ ನನ್ನದಾಯಿತು. ವೆಂಕಟೇಶ ಹೊಟ್ಟೆಪಾಡಿಗೆ ಸಣ್ಣ ಕ್ಯಾಮೆರ ಇಟ್ಟುಕೊಂಡಿದ್ದ. ಒಂದು ಫೋಟೊಗೆ 5 ರೂ. ಪಡೆಯುತ್ತಿದ್ದ. ಬಡವ ಎಂದು ರಾಜ್ಕುಮಾರ್ ಅವರು ಸಹಾಯ ಮಾಡುತ್ತಿದ್ದರು.
ಕೆಲವು ವರ್ಷಗಳ ನಂತರ ಕಲಾವಿದರ ಸಂಘದ ಕಾರ್ಯಕ್ರಮದಲ್ಲಿ ಪುನೀತ್ ಡ್ಯಾನ್ಸ್ ಮಾಡಿದ್ದು. ಈ ಕಾರ್ಯಕ್ರಮಕ್ಕೆ ಅಶ್ವಿನಿ ಬಂದಿದ್ದರು. ಈ ವೇಳೆ ಪಾರ್ವತಮ್ಮ ರಾಜ್ಕುಮಾರ್ ಅವರು ನೋಡಲ್ಲಿ, ಪುನೀತ್ ಪ್ರೀತಿಸುವ ಹುಡಗಿ ಬಂದಿದ್ದಾಳೆ ಎಂದು ತೋರಿಸಿದ್ದರು. ಆದರೆ ಜನರ ಮಧ್ಯೆ ನನಗೆ ಅಶ್ವಿನಿ ಕಾಣಿಸಲಿಲ್ಲ. ಅಪ್ಪು ಮದುವೆಯ ನಂತರ ಸೂಪರ್ ಸ್ಟಾರ್ ಆದ. ನಮ್ಮಿಬ್ಬರ ಸ್ನೇಹ ವರ್ಣಿಸಲಾಗದ್ದು. ಪುನೀತ್ನ ಕಡೇ ದಿನಗಳಲ್ಲಿ ನಾವೆಲ್ಲಾ ಮಂತ್ರಾಲಯಕ್ಕೆ ಒಟ್ಟಾಗಿ ತೆರಳಿದ್ದೆವು. ಈ ವೇಳೆ ಮನಬಿಚ್ಚಿ ಮಾತಾಡಿ, ನಕ್ಕು ಸಮಯ ಕಳೆದಿದ್ದೆವು.
ಅದೊಂದು ದಿನ ಪುನಿತ್ ನಮ್ಮ ಮನೆಯ ಬಳಿ ಬಂದಿದ್ದ. ಹೋಗಿ ಭೇಟಿಯಾಗಿದ್ದೆ. ಅದಾಗಿ ಮೂರು ದಿನಕ್ಕೆ ಪುನೀತ್ ಇನ್ನಿಲ್ಲ. ಹೃದಯ ಒಡೆದು ಚೂರಾಯಿತು. ಜೀವನದ ಆಸಕ್ತಿ, ಬದುಕಿನ ಮೇಲೆ ನಂಬಿಕೆ, ನಾವು ಯಾರು, ಈ ಭೂಮಿಗೆ ಏಕೆ ಬಂದೆವು ಎಂಬೆಲ್ಲಾ ಯೋಚನೆ ಬಂತು.
ಯಾವುದು ಸತ್ಯ, ಯಾವುದು ಮಿತ್ಯ, ನಾನು ಹೇಗೆ ಇರಬೇಕು ಏನು ಮಾಡಬೇಕು, ಬದುಕು ನಶ್ವರ, ಎಂಬ ಅನೇಕ ಪ್ರಶ್ನೆ ನನ್ನನ್ನು ಇವತ್ತಿಗೂ ಕಾಡುತ್ತಿದೆ. ನನ್ನೊಳಗೆ ನಾನು ಬಚ್ಚಿಕೊಂಡು ಸುಮ್ಮನೆ ಇರುವಂತೆ ನಟಿಸಿ ಬದುಕುತ್ತಿದ್ದೇನೆ. ನನ್ನವರು ಎಂದು ಸಿಕ್ಕಾಗ ಮನಬಿಚ್ಚಿ ಮಾತಾಡುತ್ತೇನೆ. ಕೆಲಸ ಇದ್ದಾಗ ಮಾಡಿ ಮುಗಿಸಿ, ನಂತರ ಯಾರಿಗೂ ಸಿಗದೆ ಏಕಾಂತಕ್ಕೆ ಜಾರುತ್ತೇನೆ. ಇದು ಪುನೀತ್ ಕಾಲವಾದ ಮೇಲೆ ನನ್ನಲ್ಲಾಗಿರುವ ಬದಲಾವಣೆ. ಪುನೀತ್ ಅವರ ತಂದೆ ರಾಜ್ಕುಮಾರ್ ಅವರನ್ನು ಮೀರಿ ಬೆಳೆದು ಉಳಿದುಕೊಂಡಿರುವ ದೇವಮಾನವ ಎಂದು ಜಗ್ಗೇಶ್ ಮನಬಿಚ್ಚಿ ಹೇಳಿಕೊಂಡಿದ್ದಾರೆ.