ಡಬ್ಬಿಂಗ್ ಮುಗಿಸಿದ ಜಗ್ಗೇಶ್; ತೋತಾಪುರಿ ಬಗ್ಗೆ ಫುಲ್ ಖುಷ್

Jaggesh
Published on

ಬೆಂಗಳೂರು: ಜಗ್ಗೇಶ್ ಅಭಿನಯದ ‘ತೋತಾಪುರಿ’ ಚಿತ್ರದ ಚಿತ್ರೀಕರಣ ಎರಡನೆಯ ಲಾಕ್​ಡೌನ್​ಗೂ ಮುಂಚೆಯೇ ಮುಗಿದಿತ್ತು. ಇದೀಗ ಪೋಸ್ಟ್​ಪ್ರೊಡಕ್ಷನ್ ಕೆಲಸ ಸಹ ಮುಗಿಯುವ ಹಂತಕ್ಕೆ ಬಂದಿದೆ. ಇತ್ತೀಚೆಗಷ್ಟೇ, ‘ತೋತಾಪುರಿ 1 ಮತ್ತು 2’ ಚಿತ್ರಗಳ ಡಬ್ಬಿಂಗ್ ಕೆಲಸವನ್ನು ಜಗ್ಗೇಶ್ ಮುಗಿಸಿದ್ದಾರೆ. ಎರಡೂ ಚಿತ್ರಗಳು ಮೂಡಿಬಂದಿರುವ ಬಗ್ಗೆ ಖುಷಿ ವ್ಯಕ್ತಪಡಿಸಿರುವ ಜಗ್ಗೇಶ್, ಈ ಚಿತ್ರವು ತಮ್ಮ ಕಲಾಬದುಕಿನ ಇನ್ನೊಂದು ಅದ್ಭುತ ಕೃತಿಯಾಗಲಿದೆ ಎಂದು ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ‘‘ತೋತಾಪುರಿ’ ಚಿತ್ರದ ಮಾತಿನ ಮರುಜೋಡಣೆ ಕಾರ್ಯ ಮುಗಿಯಿತು.

ಒಬ್ಬ ಬರಹಗಾರ ನಿರ್ದೇಶಕನಾದರೆ ಆತನ ಕಾಯಕ ಅದ್ಭುತ. ಅದರ ಹಿಂದಿನ ಅನುಭವ ‘ನೀರ್​ದೋಸೆ’ ಚಿತ್ರದಲ್ಲಿ ನಿಮಗಾಗಿದೆ. ‘ತೋತಾಪುರಿ’ ಚಿತ್ರವು ನನ್ನ ಕಲಾಬದುಕಿಗೆ ಮತ್ತೊಂದು ಅದ್ಭುತ ಕೃತಿ ಹಾಗೂ ನಿರ್ದೇಶಕ ವಿಜಯಪ್ರಸಾದ್ ಜನಮನ ಗೆಲ್ಲುವ ಜತೆಗೆ ರಾಜ್ಯಪ್ರಶಸ್ತಿ ಪಡೆಯುವ ಎಂಬ ಆಶಾಭಾವನೆ. ಈ ಚಿತ್ರ ಕನ್ನಡಿಗರ ಹೃದಯದಲ್ಲಿ ಬಹಳ ವರ್ಷ ಉಳಿಯುತ್ತದೆ’ ಎಂದು ಜಗ್ಗೇಶ್ ಭವಿಷ್ಯ ನುಡಿದಿದ್ದಾರೆ. ಅಂದಹಾಗೆ, ‘ತೋತಾಪುರಿ’ ಚಿತ್ರದ ಕೆಲಸಗಳು ಬಹುತೇಕ ಮುಗಿದಿದ್ದು, ಚಿತ್ರಪ್ರದರ್ಶನ ಪ್ರಾರಂಭವಾಗಲು ಚಿತ್ರತಂಡ ಕಾಯುತ್ತಿದೆ. ಎಲ್ಲವೂ ಸಹಜ ಸ್ಥಿತಿಗೆ ಬಂದ ನಂತರ ‘ತೋತಾಪುರಿ 1’ ಮೊದಲು ಬಿಡುಗಡೆಯಾಗಲಿದ್ದು, ಅದಾಗಿ ಕೆಲವು ದಿನಗಳ ಗ್ಯಾಪ್​ನ ನಂತರ ಎರಡನೆಯ ಭಾಗ ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net