

ಬೆಂಗಳೂರು: 'ನವರಸ ನಾಯಕ' ಜಗ್ಗೇಶ್ ಅವರು ಇನ್ನು ಕೆಲವೇ ದಿನಗಳಲ್ಲಿ ನಟನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 40 ವರ್ಷಗಳಾಗಿವೆ ಎಂದು ಕೆಲವು ದಿನಗಳ ಹಿಂದೆಯಷ್ಟೇ ಟ್ವೀಟ್ ಮಾಡಿದ್ದರು. ಈಗ ಆ ದಿನ ಕೊನೆಗೂ ಬಂದಿದ್ದು, ಇಂದಿಗೆ ಜಗ್ಗೇಶ್ ಚಿತ್ರರಂಗಕ್ಕೆ ಬಂದು 40 ವರ್ಷಗಳಾಗಿವೆ.
ಇದನ್ನೂ ಓದಿ: ನಾನು ದೇವದೂತನಲ್ಲ; ನಟ ಸೋನು ಸೂದ್
ಈ ಕುರಿತು ಟ್ವೀಟ್ ಮಾಡಿರುವ ಅವರು, ತಾವು 1980ರ ನವೆಂಬರ್ನ ಇದೇ ದಿನ ಕನ್ನಡ ಚಿತ್ರರಂಗಕ್ಕೆ ಬಂದಿದ್ದು ಎಂದು ಹೇಳುವುದರ ಜತೆಗೆ, ತಮ್ಮ ಬೆಳವಣಿಗೆಗೆ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.
'1980 ನವೆಂಬರ್ 17ಕ್ಕೆ ಸಿನಿರಂಗಕ್ಕೆ ನಾ ಬಂದೆ. ಇಂದಿಗೆ 40 ವರ್ಷ. ಈ ಬೆಳವಣಿಗೆಗೆ ಪ್ರೋತ್ಸಾಹಿಸಿದ ನಿರ್ದೇಶಕರು ಮತ್ತು ನಿರ್ಮಾಪಕರು, ಭುಜತಟ್ಟಿದ ಅಂದಿನ ನನ್ನ ಕಲಾಕುಟುಂಬ, ಮಾಧ್ಯಮ, ಕನ್ನಡ ಮನಸ್ಸುಗಳು! ಅಪಮಾನಿಸಿದ ಸ್ನೇಹಕ್ಕೆ, ಗೆಲ್ಲುವೆ ಹೋಗು ಕರಿಯ ಎಂದು ಹರಿಸಿದ ಅಮ್ಮ, ಜೊತೆ ನಿಂತ ಪರಿಮಳ, ಕೋಮಲ್ ಮತ್ತು ರಾಯರದಯೆಗೆ ಆಜನ್ಮ ಋಣಿ' ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.
ಜಗ್ಗೇಶ್ ಅವರು 'ತರ್ಲೆ ನನ್ಮಗ' ಮತ್ತು 'ಭಂಡ ನನ್ನ ಗಂಡ' ಚಿತ್ರಗಳಲ್ಲಿ ನಾಯಕರಾಗಿ ನಟಿಸಿದರೂ, ಅನಂತ್ ನಾಗ್ ಅಭಿನಯದ 'ಶ್ವೇತ ಗುಲಾಬಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಅಲ್ಲಿಂದ ಶುರುವಾದ ಅವರ ಸಿನಿಜರ್ನಿ, ನಿರಂತರವಾಗಿ ಮುಂದುವರೆದಿದ್ದು, 120ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.
ಇದನ್ನೂ ಓದಿ: ಲಾಕ್ಡೌನ್ನಲ್ಲಿ ನಟ ಅನುಪಮ್ ಖೇರ್ಗೆ ಮೂರನೇ ಮಗು!
ಇನ್ನು ಜಗ್ಗೇಶ್ ಅವರು ಚಿತ್ರರಂಗದಲ್ಲಿ ನಾಲ್ಕು ದಶಕಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಅವರಿಗೆ 'ನೆನಪಿರಲಿ' ಪ್ರೇಮ್, ತರುಣ್ ಸುಧೀರ್, ಸಂತೋಷ್ ಆನಂದರಾಮ್ ಸೇರದಿಂತೆ ಹಲವರು ಶುಭಾಶಯಗಳನ್ನು ಕೋರಿದ್ದಾರೆ.