ನೈಜ ಘಟನೆಯ 'ಜಾಡಘಟ್ಟ' ಚಿತ್ರದ ಹಾಡುಗಳ ಬಿಡುಗಡೆ

jadagatta
Published on

ಬೆಂಗಳೂರು: ಚಂದನವನಕ್ಕೆ ಬಹುತೇಕ ಯುವ ಪಡೆಗಳ ಸದ್ದು ಜೋರಾಗಿಯೇ ನಡೆಯುತ್ತಿದೆ. ಬಣ್ಣದ ಬದುಕು ಎಲ್ಲರನ್ನು ಆಕರ್ಷಿಸುತ್ತದೆ. ಆದರೆ ಕೆಲವರನ್ನು ಮಾತ್ರ ತನ್ನತ್ತ ಸೆಳೆಯುತ್ತದೆ. ಆ ಸಾಲಿಗೆ ಈ ಯುವ ಪಡೆಗಳು ಸೇರ್ಪಡೆಯಾಗುವ ಮೂಲಕ ನಾವು ಕೂಡ ಒಂದು ವಿಭಿನ್ನ ಚಿತ್ರವನ್ನ ಮಾಡಿದ್ದೇವೆ ಎಂದು ಹೇಳುತ್ತಾ "ಜಾಡ ಘಟ್ಟ" ಎಂಬ ಶೀರ್ಷಿಕೆಯೊಂದಿಗೆ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮವನ್ನು ಚಾಮರಾಜಪೇಟೆಯ ಕಲಾವಿದರ ಭವನದಲ್ಲಿ ಆಯೋಜಿಸಿತ್ತು.

ಚಿತ್ರತಂಡ ಅಪ್ಪು ರವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಿತು. ಚಿತ್ರರಂಗದಲ್ಲಿ ಸುಮಾರು ಹತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಸಂಕಲನಕಾರನಾಗಿ ಕಿರುತೆರೆ ಹಾಗೂ ಬೆಳ್ಳಿಪರದೆಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವಂತಹ ಯುವ ಪ್ರತಿಭೆ ಎಸ್. ರಘು ಈ ಚಿತ್ರಕ್ಕೆ ನಾಯಕ. ಕಥೆ , ಚಿತ್ರಕಥೆ , ಸಂಭಾಷಣೆ, ಸಂಕಲನ , ನಿರ್ದೇಶನವನ್ನೂ ರಘು ಮಾಡಿದ್ದಾರೆ.

ಜಾಡ ಘಟ್ಟ ಎಂಬ ಪದ ಕೇಳಿದಾಕ್ಷಣ ನೆನಪಿಗೆ ಬರುವುದು ಇದು ಯಾವುದಾದರ ಊರು ಎಂಬ ಪ್ರಶ್ನೆ ಬರುವುದು ಸಹಜ. ಹೌದು ಇದು ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿರುವ ಜಾಡ ಘಟ್ಟ ಎಂಬ ಊರು. ಆ ಊರಿನ ಸುತ್ತ ಬರೀ ಬೆಟ್ಟಗಳೇ ಆವರಿಸಿಕೊಂಡಿದೆಯಂತೆ. ಅದು ಚಿತ್ರೀಕರಣಕ್ಕೆ ಸೂಕ್ತವಾದ ಸ್ಥಳ ಎಂದು ನಿರ್ಧರಿಸಿ ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಈ ಚಿತ್ರವನ್ನು ಮಾಡಿದ್ದಾರಂತೆ. ಇದೊಂದು ಕೌಟುಂಬಿಕ ಚಿತ್ರವಾಗಿದ್ದು ತಂದೆ ಮಗನ ಬಾಂಧವ್ಯ, ಪ್ರೀತಿಯ ಸಿಂಚನ, ಗೆಳೆತನ ಹೀಗೆ ಎಲ್ಲಾ ಅಂಶಗಳನ್ನು ಒಳಗೊಂಡಿರುವಂತಹ ಚಿತ್ರ ಇದಾಗಿದೆಯಂತೆ. ಈ ಚಿತ್ರದಲ್ಲಿ ಒಟ್ಟು 4 ಹಾಡುಗಳಿದ್ದು ಅಭಿಷೇಕ್. ಜಿ. ರಾಯ್ ಸಂಗೀತ ನೀಡಿದ್ದಾರೆ. ಬೃಂದಾವನ ಆಡಿಯೋ ಸಂಸ್ಥೆ ಮೂಲಕ ಚಿತ್ರದ ಹಾಡುಗಳು ಲೋಕಾರ್ಪಣೆಗೊಂಡಿವೆ.

ಈ ಜಾಡ ಘಟ್ಟ ಚಿತ್ರವನ್ನು ಶಶಿಮಣಿ ಎಂಬ ನಿರ್ಮಾಪಕಿ ನಿರ್ಮಿಸಿದ್ದಾರೆ. ಇವರು ನಟ, ನಿರ್ದೇಶಕ ರಘು ರವರ ಸೋದರಿ ಕೂಡ ಹೌದು. ಚಿತ್ರರಂಗದಲ್ಲಿ ತಮ್ಮ ಸಹೋದರ ಬೆಳೆಯಲಿ ಎಂಬ ಆಸೆಯಿಂದ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಯುವ ಪ್ರತಿಭೆ ಸುಹಾನ. ಎಸ್ ನಾಯಕಿಯಾಗಿ ಕಾಣಿಸಿಕೊಂಡಿದ್ದು , ಇನ್ನು ಈ ಚಿತ್ರಕ್ಕೆ ಪ್ರದೀಪ್ ಜೈನ್ ಛಾಯಾಗ್ರಹಣ ಮಾಡಿದ್ದು , ಲಕ್ಷ್ಮೀಕಾಂತ್ ವಸ್ತ್ರ ವಿನ್ಯಾಸ ಮಾಡಿದ್ದಾರೆ. ಗಾಯಕ ಶಶಾಂಕ್ ಶೇಷಗಿರಿ ಈ ಚಿತ್ರಕ್ಕಾಗಿ ಒಂದು ಹಾಡನ್ನು ಹಾಡಿದ್ದಾರೆ. ಯುವ ಪ್ರತಿಭೆ ಚಂದ್ರು ಖಳನಾಯಕ ನಾಗಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದಾರೆ. ಯುವ ಪ್ರತಿಭೆಗಳು ಸೇರಿಕೊಂಡು ನಿರ್ಮಾಣ ಮಾಡಿರುವ ಈ ಚಿತ್ರವು ಶಶಿಮಣಿ ಪ್ರೊಡಕ್ಷನ್ಸ್ ಮೂಲಕ ಸಿದ್ಧವಾಗಿದೆ. ಸದ್ಯ ಚಿತ್ರ ತನ್ನ ಎಲ್ಲಾ ಕೆಲಸಗಳನ್ನು ಮುಗಿಸಿಕೊಂಡು ಬಿಡುಗಡೆ ಹಂತವನ್ನು ತಲುಪಿದೆ. ಈಗ ಚಿತ್ರತಂಡ ಲಿರಿಕಲ್ ವಿಡಿಯೋ ವನ್ನ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯವನ್ನು ಆರಂಭಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net